ಆಶಾ ಯಮಕನಮರಡಿ ಗಜಲ್

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಗಜಲ್

ಮನದ ರೂಪ ಮೊಗದಲ್ಲಿದ್ದರೆ ಎಷ್ಟು ಚೆನ್ನ
ಗುಣದ ಮುಖವು ಕಾಣುತಿದ್ದರೆ ಎಷ್ಟು ಚೆನ್ನ

ನಗುವ ಕಂಗಳ ಹಿಂದಿನ ಕೌರ್ಯಕೆ ಪರದೆ ಇದೆ ಜೋಕೆ
ಮಧುರ ಮಾತುಗಳೊಳಗಿನ ಕಹಿಯ ಗುರುತು ಸಿಗುತಿದ್ದರೆ ಎಷ್ಟು ಚೆನ್ನ

ತೊಟ್ಟ ಪೀತಾಂಬರದ ಹೊಳಪು ಎಲ್ಲಾ ಮುಚ್ಚಿರಬಹುದು
ಮಲೀನಗೊಂಡ ಅಂತರಂಗದ ಕದವ ತೆಗೆಯುತಿದ್ದರೆ ಎಷ್ಟು ಚೆನ್ನ

ರಾತ್ರಿಯ ಕತ್ತಲೆಯಲ್ಲಿ ಕಣ್ಣುಗಳು ಕುರುಡಾಗಿರಬಹುದು
ಹಗಲಿನ ಬೆಳಕು ಕಾಣಲು ಕಣ್ಣು ತೆರೆಯುತಿದ್ದರೆ ಎಷ್ಟು ಚೆನ್ನ

ಅಂದುಕೊಂಡಂತೆ ಆದರೆ ಸ್ವರ್ಗವೆ ಧರೆಗೆ ಬರುವುದು
ಆಶಾಳ ಕನಸುಗಳೆಲ್ಲಾ ನನಸುಗಳಾಗುತಿದ್ದರೆ ಎಷ್ಟು ಚೆನ್ನ


ಆಶಾ ಯಮಕನಮರಡಿ

Leave a Reply

Back To Top