ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಝಲ್
ಹೊತ್ತಲ್ಲದ ಹೊತ್ತಲ್ಲಿ ಬಂದು ಕಾಡುವೆಯೇಕೆ ನೀನು
ಮುತ್ತಲ್ಲಿ ಮತ್ತಿನ ಅಮಲನು ನೀಡುವೆಯೇಕೆ ನೀನು
ಕಣ್ಣಲ್ಲಿ ಕಣ್ಣನಿಟ್ಟು ಅಂತರಂಗದ ಭಾವವನು ಅರಿಯುವಾಸೆಯೇ. ಹೇಳು
ಬಣ್ಣಬಣ್ಣದ ಮಾತಲಿ ಕಚಗುಳಿ ಇಡುವೆಯೇಕೆ ನೀನು
ನನ್ನ ನಿನ್ನ ನಡುವೆ ಇರುವ ಅನುಬಂಧಕೆ ಬೆಲೆ ಕಟ್ಟಲಾಗದು
ಚಿನ್ನರನ್ನ ಎನುತ ಹಿಂದೆಯೇ ಓಡುವೆಯೇಕೆ ನೀನು
ಸಿಹಿ ಕಹಿಯು ಸೇರಿದಾಗಲೇ ಜೀವನದ ಸಾರ ತಿಳಿಯುವುದು ಮನಕೆ
ಮೋಹ ದಾಹದಿ ಮಿಂದು ನೋಡುವೆಯೇಕೆ ನೀನು
ಹೂವು ಹಣ್ಣಿನ ತೆರದಿ ರಾಧೆಯ ಹೃದಯದಿ ಮಧುರವಾದ ಯಾತನೆ
ನೋವು ನಲಿವಿನಲಿ ವ್ಯಥೆಯ ಬೇಡುವೆಯೇಕೆ ನೀನು