ಕಾವ್ಯ ಸಂಗಾತಿ
ಕಾಡುವ ನೆನಪುಗಳು
ಸಿಂಧು ಭಾರ್ಗವ
ಮತ್ತದೇ ಸಂಜೆ
ಕಾಡುವ ನೆನಪುಗಳು
ಅಲೆಗಳಂತೆ ಜಿಗಿದು
ತೀರದೆಡೆಗೆ ಬಂದವು
ಹೊಸ ಕನಸುಗಳಿಗೆ
ಜಾಗವಿಲ್ಲ
ಹಳೆಯ ಮಾತುಗಳಿಗೆ
ವರ್ಚಸ್ಸಿಲ್ಲ..
ನೋವುಂಡ ಮನವೀಗ
ಭಾರವಾಗಿದೆಯಲ್ಲ
ಹೊಸ ಭಾವಗಳಿಗೆ
ಬೆಸುಗೆಯಿಲ್ಲ…
ನೀನೇ ಬಳಿ ಬಂದೆ
ಒಲವಿನ ಧಾರೆ ಎರೆದೆ
ನೀನೇ ಸವಿಮಾತನಾಡಿ
ಮನದಲಿ ಗೂಡುಕಟ್ಟಿದೆ
ನೀನೇ ನನ್ನವನೆಂದು
ನಂಬಿ ನಾ ದಿನ ಕಳೆದೆ
ನೀನಿಲ್ಲದೇ ಬಾಳು
ನಡೆಯದೆಂದು ಭ್ರಮಿಸಿದೆ
ನೀ ದೂರವಾದ ದಿನವೇ
ನಾ ಕಣ್ಣೀರು ಸುರಿಸಿದೆ
ಒಂದೊಂದು
ಕಣ್ಣಹನಿಯಿಂದ
ನಿನ್ನ ಹೆಸರ
ಅಳಿಸಲು ಯತ್ನಿಸಿದೆ
ಮತ್ತದೇ ಸಂಜೆ
ಕಾಡುವ ತಂಗಾಳಿ
ಮೈ ಸೋಕಿ ನಗುವಾಗ
ಉರಿ ಏಳುವುದು
ತಂಪು ನೀಡದೇ
ಎನ್ನ ಸತಾಯಿಸುವುದು
ಕೆಂಪು ಕಣ್ಣನು ಉಜ್ಜಿ
ಸುತ್ತ ನೋಡಿದರೆ
ನೀನಿಲ್ಲದ ಈ ಜಗ
ಶೂನ್ಯ ಎನಿಸುವುದು
ಬೆವರ ಹನಿಗಳ
ನಂಟು ಬೆರೆತ ದಿನಗಳ
ಮೆಲುಕು ಹಾಕಿ
ಮೈನವಿರೇಳುವುದು
ಕ್ಷಣ ಹೊತ್ತು ಎಲ್ಲ ಮರೆತು
ನಿನ್ನೊಳಗೆ ಒಂದಾದ
ಆ ದಿನಗಳೇ
ಸುಖ ಎನಿಸುವುದು.
ಧನ್ಯವಾದಗಳು ಸರ್