ಕಾವ್ಯ ಸಂಗಾತಿ
ಡಾ.ವಾಯ್ ಎಮ್ ಯಾಕೊಳ್ಳಿ ಗಜಲ್
ಎದೆಯ ಉಸಿರಲೆ ಉಸಿರನಿಕ್ಕಿ ಪರಿಕಿಸುತ್ತಾಳೆ ಇವಳು
ದಿನದ ಪ್ರತಿ ಕ್ಷಣ ಕಣ್ಣ ಕಾವಲಿಗಿಕ್ಕಿ ನಿರುಕಿಸುತ್ತಾಳೆ ಇವಳು
ಜಗದ ಎಲ್ಲ ಗುಪ್ತಚರ ಪಕ್ಷಗಳೂ ಇವಳಿಗೆ ಸಾಥು ನೀಡುತ್ತವೆ
ಹೆಜ್ಜೆ ಹೆಜ್ಹೆಯ ಗೆರೆಗಳಲು ದುರ್ಬಿನು ಬಿಟ್ಟು ಅರಸುತ್ತಾಳೆ ಇವಳು
ಯುದ್ಧಭೂಮಿಯ ಎಲ್ಲ ಸಾಮು ಪಟ್ಟುಗಳು ಕರತಲಾಮಲಕ
ಪ್ರತಿಸಲದ ಹೋರಾಟದಲು ಗೆಲುವಿನ ನಗೆ ಬೀರುತ್ತಾಳೆ ಇವಳು
ತನ್ನದೆ ಸೇನೆ ಬೆಂಗಾವಲು ಬಾಣ ಬತ್ತಳಿಕೆಗಳ ಪಹರೆ ಜಾಲ
ಸುತ್ತ ಚಕ್ರ ವ್ಯೂಹದ ಬಂಧ ಹೆಣೆದು ಕಟ್ಟಿ ಕೆಡಹುತ್ತಾಳೆ ಇವಳು
ಪಟ್ಟಗಟ್ಟಿದ ಚಕ್ರಿಯೂ ಸೋತೇ ಗೆದ್ದಿದ್ದಾನೆ ಸೊಲುವದೆ ಅಸ್ತ್ರ
ಸೋತು ಗೆದ್ದ ಯಯಾಗೆ ತನ್ನೆದೆಯ ಸಿಂಹಾಸನ ಸಿಂಗರಿಸುತ್ತಾಳೆ ಇವಳು