ಕಾವ್ಯ ಸಂಗಾತಿ
ತರಹಿ ಗಜಲ್
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್( ಹೈ ತೋ ಸರ್ ಅವರ ಊಲಾ ಮಿಸ್ರಾಗೆ)
ಬಿಸಿಲ ಗುಡಿಸಿ ಬೆಳಕಿಗೆ ಜಳಕ ಮಾಡಿಸಿ ಒಂದಿಷ್ಟು ಮಾತಾಡಬೇಕಿದೆ
ಟಿಸಿಲ ನುಡಿಸಿ ಉಸಿರಿಗೆ ಕುಸುರ ಬಿಡಿಸಿ ಒಂದಿಷ್ಟು ಮಾತಾಡಬೇಕಿದೆ
ತೇಲುತ ಹೋದೆ ಹನಿಯಲಾರದ ತುಂಬಿದೊಡಲ ಕರಿಕಪ್ಪು ಮೋಡದಲೆಯಾಗಿ
ಹಸಿರ ಹರಿಸಿ ಕಂಗಳಿಗೆ ಕಂಬನಿಯ ಕುಡಿಸಿ ಒಂದಿಷ್ಟು ಮಾತಾಡಬೇಕಿದೆ
ಬೀಸುಗಾಳಿಗೆ ತೂರಿ ದೂರಿದೆ ಓದಲಾರದ ಒಲವಿನೋಲೆಯ ಕವಿತೆಯಂತೆ
ಪದವ ಕರೆಸಿ ಭಾವದೆದೆಗೆ ಪುಳಕ ಮಿಡಿಸಿ ಒಂದಿಷ್ಟು ಮಾತಾಡಬೇಕಿದೆ
ನಗಲಾರದ ನಕ್ಷತ್ರದ ಬೆಳಕಾಗಿ ಉರುಳಿ ಕರಗಿದೆ ತುಟಿಯಂಚಲಿ
ಮಿನುಗ ಮುಡಿಸಿ ಬೆಳದಿಂಗಳಿಗೆ ಗೆಜ್ಜೆ ತೊಡಿಸಿ ಒಂದಿಷ್ಟು ಮಾತಾಡಬೇಕಿದೆ
ಬಿರಿಯಲಾರದ ಮಲ್ಲಿಗೆಯ ಮೃದು ಮೊಗ್ಗಾಗಿ ಮುಖ ಮುದುರಿ ನಿಂದೆಯಲ್ಲ
ಕನಸ ಕರೆಸಿ ಮಳೆಬಿಲ್ಲಿಗೆ ಬಣ್ಣದುಡಿಗೆ ಉಡಿಸಿ ಒಂದಿಷ್ಟು ಮಾತಾಡಬೇಕಿದೆ
ಒಲವ ತೇಲುದೀಪಕೆ ಎದೆಯ ನೋವಿನ ಬೆಣ್ಣೆ ನೀಡುತ್ ಮೌನವಾದೆಯಲ್ಲ
ಹೆಪ್ಪಿಟ್ಟ ಭಾವ ಕುಲುಕಿಸಿ ಕಡಗೋಲ ಕಡೆಸಿ ಒಂದಿಷ್ಟು ಮಾತಾಡಬೇಕಿದೆ.
ಚೈತ್ರದ ಚಿಗುರ ಮರೆತ ಮಾಮರದ ನೀರವತೆಯ ತೇರನೆಳೆವ ಮೂಕ ಯಾತ್ರಿಕನಾದೆಯಲ್ಲ
ತಿಂಗಳನ ಅಂಗಳಕಿಳಿಸಿ ಇಂದು ನೆನಪ ಗಿಲಗಂಚಿ ಹಿಡಿಸಿ ಒಂದಿಷ್ಟು ಮಾತಾಡಬೇಕಿದೆ
ಬಿಸಿಲು,ಮೋಡ, ಗಾಳಿ,ಬೆಳಕು, ದೀಪ, ಮಲ್ಲಿಗೆ, ಎಲ್ಲವೂ ತಮ್ಮ ತಮ್ಮ ಭಾಷೆಯಲ್ಲಿ ದಿನವೂ ಮಾತನಾಡುತ್ತವೆಯೊ ಏನೋ ಅವುಗಳ ಭಾಷೆ ನಮಗೆ ಅರ್ಥ ಆಗದೆ ಇರಬಹುದು ಅಲ್ವಾ ?
ಭಾವಗಳಿಗೆ ಆಶಯ ಭಾಷೆ ಯ ಹಂಿ ಎಲ್ಲಾ…