ಆದಪ್ಪ ಹೆಂಬಾ ಮಸ್ಕಿ ಓ ದೇವರೇ

ಕಾವ್ಯಸಂಗಾತಿ

ಓ ದೇವರೇ

ಆದಪ್ಪ ಹೆಂಬಾ ಮಸ್ಕಿ

ಕಲ್ಲಾಗಿದ್ದ ನಿನ್ನನ್ನು
ಕೆತ್ತಿ ಕಟೆದು
ತಿದ್ದಿ ತೀಡಿ ನುಣುಪಿಸಿ
ಹೊಳಪಿಟ್ಟು ಮೂರ್ತಿಯಾಗಿಸಿದವನು ಶಿಲ್ಪಿ
ಶಿಲೆಯನ್ನು ಶಿಲ್ಪಮಾಡುವುದರಲ್ಲೇ
ದಿನಕಳೆದು
ದೀನನಾದವನು ಅವನು
ಏನೂ ಮಾಡದೇ
ಮಾತನ್ನೂ ಆಡದೇ
ದೇವರಾದವನು ನೀನು ||

ನೀರಾಭಿ಼ಷೇಕ ಕ್ಷೀರಾಭಿಷೇಕವ ಮಾಡಿ
ಮೆದು ಮಧು ಮಜ್ಜನವಮಾಡಿ
ಮಗುವಿನಂತೆ ಮೈ ಒರೆಸಿ
ತೀಡಿಟ್ಟ ಗಂಧವನು ಲೇಪಿಸಿ
ಕುಂಕುಮವನಿಟ್ಡು ಹೂ ಮುಡಿಸಿ
ಕೈಮುಗಿದು ನಿಂತಿರುವನು ಅವನು
ಅವನನ್ನು ನೋಡದೇ
ಉಸಿರನ್ನೂ ಬಿಡದೇ
ದೇವರಾದವನು ನೀನು ||

ಹೊಟ್ಟೆ ಇಲ್ಲದ ನಿನಗೆ ಕಷ್ಟವೆಲ್ಲಿ ?
ಈಗ ಬಂದವನ ಹೊಟ್ಡೆ ನೋಡು
ತಾಗಿದೆ ಅದು ಅವನ ಬೆನ್ನಿಗೆ
ನಿತ್ಯ ತಪ್ಪದು ನಿನಗೆ ಅವನ ಮನೆ ಹೋಳಿಗೆ
ಹೊಸೆದ ಬತ್ತಿಯನು ಎಣ್ಣೆಯಲದ್ದಿ
ದೀಪದ ಬೆಳಕಲಿ ನೀ
ಹೊಳೆವಂತೆ ಮಾಡಿದ್ದೂ ಅವನೇ
ತಂದ ಅನ್ನವ ತಿನ್ನದೇ ಅವನಿಗೇನೂ ನೀಡದೇ
ದೇವರಾದವನು ನೀನು ||

ಏನು ಮಾಡದ ನೀನು
ದೇವರಾದುದು ಹೇಗೆ ?
ಲೆಕ್ಕಿಸಿ ತರ್ಕಿಸಿ
ಕಣ್ಣಗಲಿಸಿ ಕುಳಿತವನು ನಾನು
ಎಲ್ಲವನು ಎಲ್ಲರನು
ಸೃಷ್ಟಿಸಿಯೂ ಬೀಗದೇ
ನಸು ನಗುತ
ಮೌನದ ಶಕ್ತಿಯನು ಸಾರುತ
ದೇವರಾದವನು ನೀನು ||


One thought on “ಆದಪ್ಪ ಹೆಂಬಾ ಮಸ್ಕಿ ಓ ದೇವರೇ

Leave a Reply

Back To Top