ಅಭಿಜ್ಞಾ ಪಿ.ಎಮ್ ಗೌಡ-ಕತ್ತಲಿಗೆ ಬೆಳದಿಂಗಳ ಬೊಟ್ಟು

ಕಾವ್ಯ ಸಂಗಾತಿ

ಕತ್ತಲಿಗೆ ಬೆಳದಿಂಗಳ ಬೊಟ್ಟು

ಅಭಿಜ್ಞಾ ಪಿ.ಎಮ್ ಗೌಡ

ಕ್ಷಾಂತಿಯೊಳು ಕಾಂತಿಗೊಳ್ಳುತಿರೊ
ಮುಗಿಲ ಕೌಳದ ಸೋಮನಿವ
ಮುಸ್ಸಂಜೆಯ ಸಾಮ್ರಾಟ
ಉದಧಿಯ ಸಲಿಲದಿ
ನಕ್ಕು ನಲಿದು ತನ್ನ ಸೌಂದರ್ಯ
ಬಿಂಬಿಸೊ ತಂಗದಿರನಿವ…!

ಅನುವೀಡಿನ ಜೀವ
ಅನುಲಂಘನೀಯ ಭಾವ
ಅಬ್ಬಾ.! ಶಶಿ ನೋಡಲೆನಿತು ಚಂದ
ಶೋಧನೆಯ ಕಣ್ಗಳಿಗಂತು ಹಬ್ಬ
ಎದೆಬಯಲ ಕ್ಲೇಶಕಳೆದು
ಬೆಳ್ಳಕ್ಕಿಯಂತೆ ಜೀಕುವ
ವಿಸ್ಮಯದ ಕಬ್ಬ..!
ಪರಶಿವನ ಜಟೆಯೊಳು
ನೀನೊಂದು ಹೊಳೆವ ಸಣ್ಣ ಮಣಿ
ಅದ್ಭುತ ಅಧ್ಯಾಹಾರ
ಅನವರತ ಅನುರಾಗಿ
ನಮ್ಮೊಳಗಿರೊ ಜಗದ ಕಣ್ಮಣಿ..!

ಕತ್ತಲೆಂಬ ನೊಸಲಿಗೆ
ಬೆಳ್ಳಿಯ ಬೊಟ್ಟು ನೀನು
ಹಾಲ್ಗಡಲ ಹೊಳಪು
ಧರೆಯೊಡಲಿಗೆ ತಣಿಪು
ಮುಸ್ಸಂಜೆಯಿಂದ ಮುಂಜಾನೆವರೆಗೆ
ಹಾಲ್ಗಡಲ ಸೃಷ್ಟಿಸೊ ಒಡೆಯ
ತಂಪುನಿಂಪಿನೊಳು
ಪುಳಕವಾಗಿಹೆ ಸರ್ವರ ಹೃದಯ
ಕಣ್ಮನ ಸೆಳೆವ ಮಕ್ಕಳ ಮಾಮ
ಕತ್ತಲೋಡಿಸೊ ಧಾಮನಿವ
ಸೊಗಸಿನಲಿ ಔಚಿತ್ಯ,ಬೆರಗಿನಲಿ ಔನ್ನತ್ಯ…

ಇರುಳ ಮುಗಿಲ ಮಾರಿಗೆ
ಬೆಳ್ಳಿ ಬೆಳಕಿನ ತೋರಣ ತೊಟ್ಟು
ತೆರೆಯ ಮೇಲಣ ನೊರೆ ಹಾಲಿನಂತೆ
ಹೊಳೆವ ಹೊಚ್ಚ ಹೊಸ ಬೊಟ್ಟು
ಮೇಘಗಳ ಮರೆಯೊಳು
ಇಣುಕಿ ನೋಡೊ ಜಾಣ
ಹೊಳೆ ಹೊಳೆಯಾಗಿ ಹರಿಸೊ
ಮುದ್ದಾದ ಬೆಳದಿಂಗಳ ರಿಂಗಣ…!

ಕ್ಲಾಂತಿಯಿರದೆ ದುಡಿವ ಅನೂಹ್ಯ
ಅನುಭಾವದ ಮೇಳದಲಿ
ಅನುಭೂತಿಯ ಏಣಾಂಕ ನೀನಲ್ಲವೇ.?
ಅನುಗೊಳಿಸುವ ಚುಕ್ಕಿ ತಾರೆಗಳ
ಕೆಣಕಿ ತಿಣುಕಿ ನಲಿವ
ಕೂಟವದು ಸಹ್ಯವಲ್ಲದೆ ಮತ್ತೇನು.?
ಓ ಹುಣ್ಣಿಮೆಯ ಚಂದಿರ
ಪ್ರೇಮಿಗಳ ಒಡನಾಟಕೆ ನೀನಲ್ಲವೇ
ಲಾಲಿತ್ಯದ ಹಂದರ..?

ಮೋಡಗಳಂತೆಯೆ
ಚಲಿಸುವಿಕೆಯ ಭಾಸ
ಬಿಸುಪನು ಮುಚ್ಚಿ ತಂಪನ್ನೀಯುತ
ಪ್ರೇಮಿಗಳ ಹೃದಯ ಸಾಮ್ರಾಜ್ಯದ
ಅಧಿಪತಿಯಾಗಿಹೆ ಅಲ್ಲವೇ.?
ಮೋಡಗಳ ದಿಬ್ಬಣದಲಿ
ನೀನೊಂತರ ನೊರೆಹಾಲಿನ
ಹುರುಪಂತೆ ಮಂದಸ್ಮಿತ
ಭೋರ್ಗರೆವ ಪಯೋಧಿ
ನಸುನಾಚೊ ಇಳೆಯೊಡಲು
ನೈದಿಲೆಗಳ ಉನ್ಮೀಳಿತಕೂ
ನೀನೆ ಅಲ್ಲವೇ ಚಂದಿರ.?


Leave a Reply

Back To Top