ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಳದಿ ಪ್ಯಾಕ್ ನಲ್ಲಿರುವುದೆಲ್ಲಾ ಎಳ್ಳೆಣ್ಣೆಯಲ್ಲ

ಕಥಾ ಸಂಗಾತಿ

ಬೆಳ್ಳಗಿರುವುದೆಲ್ಲಾ ಹಾಲಲ್ಲ

ಹಳದಿ ಪ್ಯಾಕ್ ನಲ್ಲಿರುವುದೆಲ್ಲಾ ಎಳ್ಳೆಣ್ಣೆಯಲ್ಲ

 ಯೋಗೇಂದ್ರಾಚಾರ್  ಎ ಎನ್

ಎಣ್ಣಿಗನೂರಲ್ಲಿ ಒಬ್ಬ ವ್ಯಾಪಾರಿ ತುಂಬಾ ಮಾತುಗಾರ ಮಾತಿನ ಮಲ್ಲ ವ್ಯಾಪಾರಕ್ಕೆಂದು ಸಂತೆಯಲ್ಲಿ ಕೂತರೆ ಸಂಜೆ ನಾಲ್ಕರ ಹೊತ್ತಿಗೆಲ್ಲಾ ಇವನಲ್ಲಿದ್ದ ಎಣ್ಣೆ ಪ್ಯಾಕೇಟ್ ಗಳಲ್ಲಾ ಖಾಲಿ ಅದರಲ್ಲೂ ದೀಪದ ಎಳ್ಳೆಣ್ಣೆ ಮಾರುವುದರಲ್ಲಂತೂ ನಿಸ್ಸೀಮ. ಈ ವ್ಯಾಪಾರದ ಕಾಯಕದಿಂದಾಗಿ ಇವನಿಗೆ ಎಲ್ಲರೂ ಎಳ್ಳೆಣ್ಣೆ ನಾಗಪ್ಪ ಎಂದೇ ಕರೆಯುತ್ತಿದ್ದರು. ಇವನು ಹವಾಯ್ ಚಪ್ಪಲಿಯಿಂದ ಸಾವಿರ ರೂಪಾಯಿಗಳ ಸ್ಯಾಂಡಲ್ ಗೆ , ಹಳೇ ಡಕೋಟ ಬೈಕ್ ನಿಂದ ಸೂಪರ್ ಲಗ್ಸರಿ ಎ ಸಿ ಕಾರ್ ವರೆಗೆ ಬೆಳೆದದ್ದು ಇದೇ ಎಳ್ಳೆಣ್ಣೆ ವ್ಯಾಪಾರದಿಂದ.
ಅದೇ ಊರಲ್ಲಿ ಮತ್ತೊಬ್ಬ ವ್ಯಾಪಾರಿ ಹೇಳಿಕೊಳ್ಳುವಷ್ಟು ಶ್ರೀಮಂತ ವ್ಯಾಪಾರಿ ಅಲ್ಲದಿದ್ದರೂ ಹೆಸರಿಗೆ ತಕ್ಕಂತೆ ಗುಣ ಹೊಂದಿದ ವ್ಯಾಪಾರಿ ವಿನಯ್. ಇವನದು ಗಾಂಧಿ ತತ್ವ ವ್ಯಾಪಾರವೆಂದರೆ ಲಾಭ ಪಡೆಯುವುದು ಸತ್ಯ ಆದರೆ ಅದರಲ್ಲೂ ಶೀಲವಂತಿಕೆ ಇರಬೇಕು ಎಂಬ ಆಶಯ ಹಾಗಾಗಿ ಈತ ಬಂದ ಗ್ರಾಹಕರಿಗೆ ವ್ಯಾಪರಿ ಕಂಪನಿಗಳ ಕೆಲವು ಗುಟ್ಟುಗಳನ್ನು ಜನರೆದುರು ರಟ್ಟು ಮಾಡುತ್ತಿದ್ದ. ಇದು ಊರಿನ ಕೆಲವು ವ್ಯಾಪಾರಿಗಳಿಗೆ ಹೊಟ್ಟೆಕಿಚ್ಚಿನ ಸಂಗತಿಯಾಗಿತ್ತು.

ಹೀಗೆ ದಿನಗಳು ಉರುಳುತ್ತಿದ್ದಂತೆ ಎಣ್ಣಿಗನೂರಿನ ಆರಾಧ್ಯ ದೇವ ಶನೀಶ್ವರನ ಜಾತ್ರೆ ಬಂದಿತು ಬರೋಬ್ಬರಿ ಒಂದು ವಾರ ನಡೆಯುವ ಜಾತ್ರೆ ಅದರಲ್ಲೂ ಶನೀಶ್ವರನಿಗೂ ಹಾಗೂ ಆತನ ಪ್ರಾಣ ಗೆಳೆಯ ಹನುಮನಿಗೂ ಎಳ್ಳೆಣ್ಣೆಯಿಂದ ಹಚ್ಚಿದ ದೀಪವೇ ಪ್ರಿಯ ಎಂದು ಎಳ್ಳೆಣ್ಣೆ ನಾಗಪ್ಪ ಡಿಸ್ಟ್ರಿಬ್ಯೂಟರ್ ಕೈ ಬೆಚ್ಚಗೆ ಮಾಡಿ ಆ ತಾಲ್ಲೂಕಿನಲ್ಲಿ ಬರುವ ಎಲ್ಲಾ ಎಳ್ಳೆಣ್ಣೆಯ ಮಾಲನ್ನು ತಾನೇ ತರಿಸಿಕೊಂಡಿದ್ದ . ಜಾತ್ರೆಯೂ ಆರಂಭವಾಯಿತು ಎಳ್ಳೆಣ್ಣೆ ನಾಗಪ್ಪ ಜಾತ್ರೆಯಲ್ಲಿ ಹಳದಿ ಪ್ಯಾಕೇಟ್ ಹಿಡಿದು ಪ್ಯೂರ್ ಎಳ್ಳೆಣ್ಣೆ ಪ್ಯೂರೋ ಪ್ಯೂರ್ ದೇವರಿಗೆ ಹಚ್ಚಿದರೆ ನಿಮ್ಮ ಪಾಪವೆಲ್ಲಾ ನಾಶ ಎಂದೊಡನೆ ಭಕ್ತರು ಎಳ್ಳೆಣ್ಣೆಯ ಪ್ಯಾಕೇಟ್ ಗಳನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದರು.

ವ್ಯಾಪಾರದ ಅಬ್ಬರ ಕಂಡು ಸ್ವತಃ ನಾಗಪ್ಪನೇ ದಂಗಾದ ಎಳ್ಳೆಣ್ಣೆಯ ದೀಪದ ಎಣ್ಣೆಯಲ್ಲಿ ಶನೀಶ್ವರ ನನಗೂ ಸ್ವಲ್ಪ ಪುಣ್ಯ ನೀಡಲಿ ಅಂತ ಒಂದು ಪ್ಯಾಕೇಟ್ ಗೆ ಐದು ರೂಪಾಯಿ ಡಿಸ್ಕೌಂಟ್ ಕೂಡ ಮಾಡಿದ. ಒಂದೇ ವಾರದಲ್ಲಿ ಲಕ್ಷ ಲಕ್ಷ ಸಂಪಾದಿಸಿ ಭಕ್ತರು ಕೊಂಡೊಕೊಂಡ ಎಳ್ಳೆಣ್ಣೆಯಲ್ಲಿ ನನ್ನದೂ ಪಾಲಿದೆ ನನಗೂ ಪುಣ್ಯ ಲಭಿಸಿದೆ ಎಂದು ಎದೆಯುಬ್ಬಿಸಿಕೊಂಡಿದ್ದ. ಜಾತ್ರೆ ಮುಗಿಯಿತು ವ್ಯಾಪಾರಿಗಳು ರಸ್ತೆಯ ವರೆಗೂ ವಿಸ್ತರಿಸಿಕೊಂಡಿದ್ದ ಅಂಗಡಿಯನ್ನು ಸರಿಪಡಿಸಿಕೊಂಡು ಮೂಲ ಸ್ಥಳಕ್ಕೆ ನಡೆದರು. ಜಾತ್ರೆ ಮರು ದಿನ ಎಂದೂ ಕಾಣದ ಸಾಧುವೊಬ್ಬ ಕಾವಿ ಬಣ್ಣದ ಕಚ್ಚೆ ತೊಟ್ಟು ಮೈ ತುಂಬಾ ರುದ್ರಾಕ್ಷಿ ತೊಟ್ಟು ಹಣೆಗೆ ವಿಭೂತಿ ಬಳಿದುಕೊಂಡು ಕಮಂಡಲವನ್ನು ಹಿಡಿದು ಆ ದಿನದ ಒಂದು ಹೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡಲು ಅದೇ ಬೀದಿಯಲ್ಲಿ ಬರುತ್ತಿದ್ದ. ಇದನ್ನು ಕಂಡ ಎಳ್ಳೆಣ್ಣೆ ನಾಗಪ್ಪ ಸಾಧುವಿಗಾಗಿ ಒಂದು ತಟ್ಟೆಯಲ್ಲಿ ಹಣ್ಣು ಹಂಪಲುಗಳನ್ನು ಇಟ್ಟು ಮೇಲೆ ಅಡಿಕೆ ಎಲೆ ನೂರೊಂದು ರೂಪಾಯಿ ದಕ್ಷಿಣೆಯನ್ನೂ ಇಟ್ಟು ಕೊಡಲು ಮುಂದಾದ. ಆಗ ಅವನ ಮುಖ ನೋಡಿದ ಸಾಧು “ಎಳ್ಳೆಣ್ಣೆ ಎಂಬ ನಂಬಿಕೆಯಲ್ಲಿ ನಿನಗಂಟಿದ ಪಾಪದ ನಂಟು ಬಹಳವಿದೆ” “ಮೊದಲು ಅದನ್ನು ತೊಳೆದುಕೊ” “ನಿನ್ನ ಹಣ್ಣು ಹಣ ಹೊಟ್ಟೆ ತುಂಬಿಸಬಹುದು ಮನಸ್ಸನ್ನಲ್ಲ” ಎಂದು ಹರಿತ ಖಡ್ಗದಂತಹ ಮೂರು ನುಡಿಗಳನ್ನಾಡಿ ಪಕ್ಕದ ಅಂಗಡಿಯ ವಿನಯ್ ನ ಬಳಿ ಹೋಗಿ ಒಂದು ಹಿಡಿಯಷ್ಟು ಅಕ್ಕಿ ತಗೆದುಕೊಂಡು ಕ್ಷಣಾರ್ಧದಲ್ಲೆ ಕಣ್ಮರೆಯಾದ.

ಎಳ್ಳೆಣ್ಣೆಯ ಬಗ್ಗೆ ಹಗುರವಾಗಿ ಮಾತನಾಡುವ ಆ ವಿನಯನ ಮನೆಯಲ್ಲಿ ಭಿಕ್ಷೆ ತಗೆದುಕೊಂಡ ಆ ಸಾಧು ಇಷ್ಟೊಂದು ಎಳ್ಳೆಣ್ಣೆಯನ್ನು ಮಾರಿ ಅದರಲ್ಲೂ ಪುಣ್ಯ ಪಡೆದ ನನ್ನ ಬಳಿ ಏನನ್ನೂ ಬೇಡಲಿಲ್ಲವಲ್ಲ ಎಂದು ಎಳ್ಳೆಣ್ಣೆ ನಾಗಪ್ಪನ ಮನಸ್ಸು ಕಸಿ ಬಿಸಿ ಆಯಿತು. ಆ ಸಾಧುವನ್ನು ಹುಡುಕಿಕೊಂಡು ಹೊರಟ ತುಸು ಹೊತ್ತು ತಿರುಗಿದ ಮೇಲೆ ಊರ ಹೊರಗೆ ಬೋಧಿ ವೃಕ್ಷದಡಿಯಲ್ಲಿ ಕುಳಿತ ಸಾಧು ಕಂಡ. ಓಡಿ ಬಂದವನೆ ಸಾಧುವಿನ ಬಳಿ ಇವನ ಪಾಪ ಪುಣ್ಯದ ಪ್ರಶ್ನೆಯನ್ನು ಮುಂದಿಟ್ಟ.

ಎಳ್ಳೆಣ್ಣೆ ನಾಗಪ್ಪನ ಆತುರ ಕಾತುರವನ್ನು ಕಂಡು ತುಸು ನಕ್ಕು ತಮ್ಮ ನಾಗಪ್ಪ ನೀ ಮಾರುವ ಎಳ್ಳೆಣ್ಣೆಯಲ್ಲೇ ಪಾಪದ ಗಂಟು ನಿನ್ನ ಬಟ್ಟೆಗೆ ಅಂಟಿದೆ.ಸಾಧುಗಳೇ ಅದರಲ್ಲೇನಿದೆ ನಾನು ಹಳದಿ ಪ್ಯಾಕೇಟ್ ನಲ್ಲಿರುವ ಎಣ್ಣೆಯನ್ನು ನನ್ನ ಮಾತಿನ ಚಮತ್ಕಾರದಿಂದ ಮಾರಿರುವೆ ಅದರಲ್ಲೂ ಐದು ರೂಪಾಯಿ ಕಡಿಮೆ ಕೊಟ್ಟಿದ್ದೇನೆ. ವ್ಯಾಪಾರ ಎಂದರೆ ಲಾಭ ಹಾಗಾಗಿ ನಾನು ನನ್ನ ಮಾತನ್ನೇ ಬಂಡವಾಳವನ್ನಾಗಿಸಿಕೊಂಡು ಎಳ್ಳೆಣ್ಣೆಯನ್ನು ಮಾರಿದ್ದೇನೆ ಮತ್ತು ಗ್ರಾಹಕರು ಕೊಂಡುಕೊಂಡು ದೇವರಿಗೆ ಅರ್ಪಿಸಿದಾಗ ಅದರಲ್ಲೂ ನನಗೆ ಪುಣ್ಯ ಬರಬೇಕು ಅಲ್ವಾ.

ಸಾಧು ಗಹಗಹಿಸಿ ನಕ್ಕ ಗೊತ್ತಿಲ್ಲದೆ ಮಾಡಿದ ಮೋಸಕ್ಕಿಂತ ಗೊತ್ತಿದ್ದು ಮಾಡಿದ ಮೋಸ ಹೆಚ್ಚು ಪಾಪದ ಗಂಟನ್ನು ಹೊತ್ತು ತರುತ್ತದೆ . ಬೆಳ್ಳಗಿರುವುದೆಲ್ಲ ಹಾಲಲ್ಲ ಹಳದಿ ಪ್ಯಾಕೇಟ್ ಒಳಗೆ ಇರುವುದೆಲ್ಲಾ ಎಳ್ಳೆಣ್ಣೆ ಅಲ್ಲ ಎಂದು ನಿನಗೂ ಗೊತ್ತು ಅಷ್ಟೇ ಅಲ್ಲದೆ ನೀನೇ ಮಾರುವ ಎಳ್ಳೆಣ್ಣೆಯಲ್ಲಿ ಎಷ್ಟು ಪ್ರಮಾಣದಲ್ಲಿ ಎಳ್ಳೆಣ್ಣೆ ಇದೆ ಎಷ್ಟು ಪ್ರಮಾಣದಲ್ಲಿ ಅಕ್ಕಿ ಹೊಟ್ಟಿನ ಎಣ್ಣೆ ಇದೆ ಎಂಬುದು ನಿನಗೆ ಗೊತ್ತಿದ್ದರೂ ನೀನು ಬೀದಿಯಲ್ಲಿ ನಿಂತು ಶುದ್ಧ ಪ್ಯೂರ್ ಎಳ್ಳೆಣ್ಣೆ ದೇವರಿಗೆ ಶ್ರೇಷ್ಠ ಎಂದು ಜನರಿಗೆ ಮೋಸ ಮಾಡಿರುವೆ. ಹಾಲಿಂದು ಹಾಲಿಗೆ ನೀರಂದು ನೀರಿಗೆ ಎಂಬಂತೆ ಅದರಲ್ಲಿರುವ ಎಳ್ಳೆಣ್ಣೆಯಷ್ಟೇ ನಿನ್ನ ಪುಣ್ಯ ಉಳಿದದ್ದೆಲ್ಲಾ ಎಳ್ಳೆಣ್ಣೆ ಎಂಬ ನಂಬಿಕೆಯ ಮೇಲೆ ನಿನಗಂಟಿದ ಪಾಪ. ಗ್ರಾಹಕರೇ ನಮ್ಮ ದೇವರು ಎನ್ನುವ ನೀನು ಆ ದೇವರಿಗೆ ನೀನು ತಿಳಿದು ತಿಳಿದು ಮೋಸ ಮಾಡಿರುವೆ ಎನ್ನುತ್ತ ಬೋಧಿ ವೃಕ್ಷದ ಅಡಿ ಸಾಧು ಕಣ್ಮುಚ್ಚಿ ಧ್ಯಾನ ಮಗ್ನನಾದ.
ಎಳ್ಳೆಣ್ಣೆ ನಾಗಪ್ಪ ಕಣ್ತೆರದು ನಡೆಯಲಾರಂಭಿಸಿದ ಆದರೂ ಬಟ್ಟೆಗಂಟಿದ ಎಳ್ಳೆಣ್ಣೆ ಆಗಾಗ ಅವನನ್ನು ಜಾರಿ ಬೀಳಿಸುತ್ತಿತ್ತು.


One thought on “ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಳದಿ ಪ್ಯಾಕ್ ನಲ್ಲಿರುವುದೆಲ್ಲಾ ಎಳ್ಳೆಣ್ಣೆಯಲ್ಲ

  1. ಕಥೆ ಚಿಕ್ಕದಾಗಿ ಸರಳವಾಗಿದ್ದರೂ ಉತ್ತಮ ಸಂದೇಶ ನೀಡುತ್ತದೆ

Leave a Reply

Back To Top