ಕಾವ್ಯ ಸಂಗಾತಿ
ಭೂಕಂಪ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಗರ್ಭದಾಳದಲಿ ಭಾರಿ ಬಂಡೆ
ಹಲ್ಲುಗಳು ಒಂದರಮೇಲೊಂದೇರಿ
ಛಳಿ ಜ್ವರದಲಿ ನಡುಗಿದಂತೆ
ಮಸೆದು ಉಜ್ಜುಜ್ಜಿ ಗಡಗಡಿಸಿದವು!
ಮೇಲೆ
ನೇರ ನಿಂತಿದ್ದೆಲ್ಲ ನೆಲಕ್ಕೊರಗಿ
ಕ್ಷಣಾರ್ಧದಲಿ
ಕಣ್ಣ ನೀರು ರಕ್ತ ತೊರೆ!
ಅಲ್ಲೊಂದು ಕಲ್ಲುಬಂಡೆ ಕೆಳಗೆ
ಕೂಗಿ ಬೊಬ್ಬಿಡುವ ಬಾಯಿ
ಮರುಬದುಕಿಗಾಗಿ
ಇಲ್ಲೊಂದು ಏಳೆಂಟು ತಿಂಗಳ
ಆಗತಾನೆ ತಬ್ಬಲಿಯಾದ ಶಿಶು
ಹಸಿವಿನ ಅರಚು
ಗುಟುಕು ಹಾಲಿಗಾಗಿ
ಇಂಥ ಬಗೆಬಗೆಯ ರಾಶಿ ಹಲುಬು!
ಭೂಮಿ ಮೇಲಿದ್ದ ಎಲ್ಲ ರಂಗಿನ
ಬೇಲಿ ಸೂರು ಉರುಳಿ
ಯಾವುದು ಯಾರದು
ಏನೂ ಲವಲೇಶ ತಿಳಿಯಲಾರದು
ಛಿದ್ರ ಕಾಂಕ್ರೀಟು ಕಲ್ಲು ಗಾಜು
ಚೂರುಪಾರು ಎಷ್ಟು ಕೆದಕಿದರು
ಮೊದಲಿನೊಂದೂ ಒಟ್ಟಾಗಿ ದೊರಕದು
ಮೂಲೆಮೂಲೆಗಳಲು ಹಾಳು ಹರಕು
ಅನಂತ ರೋದನದ ಬದುಕು!
ಯಾವ ದಿಕ್ಕು ದೇಶ ಬಣ್ಣ
ಎಂಥ ಜಾತಿ ಮತ ಬಣ
ಯಾವ ಥರದ ಭೇದ ಭಾವ
ರಿಯಾಯಿತಿಗಳಿಲ್ಲದ ಧೂಳೀಪಟ!
ಉರುಳುರುಳಿ ಅಳಿದ ಸೂರುಗಳ
ಮೈಮನಗಳ ಆಕ್ರಂದನ
ದಿನವೊಂದಕೆ ಮಿಲಿಯಾಂತರ ಮೈಲಿ
ಭರ್ರನೋಡುವ ಭೂಮಿ
ಕ್ಷಣ ಒಂದಕು ಆಚೀಚೆ
ಅಲುಗಿಸದೆ
ಅನಾದಿಕಾಲದಿಂದಲು ನಮ್ಮ
ನೆಟ್ಟ ನಿಂತಂತೆ ನಡೆದಂತೆ
ಸಲಹಿದ್ದರು ಹೆತ್ತಮ್ಮನ ಹಾಗೆ
ಈ ಕ್ಷಣಿಕ ಮಾತ್ರ ನಡುಕಕೇಕೆ
ಇಷ್ಟು ಅಗಾಧ ಧ್ವಂಸ
ಕುರುಕ್ಷೇತ್ರ ಪ್ರಲಾಪ?
ಅದೆಂಥ ಧಾವಂತದ ಸಹಾಯ
ಅನುಕಂಪದ ಮಹಾಪೂರ
ಏನೆ ಬಂದರು ಎಷ್ಟೆಷ್ಟೆ ಬಂದರು
ಮುಂದೆ…?
ಇಂಥ ಸಾವು
ಕ್ರೂರ ದುರ್ಮುಖ ಅನಂತ ಕಂಠರ
ಪುನರುತ್ಥಾನ!
ಯಾವ ನ್ಯಾಯಾಲಯ
ಯಾವುದು ಅಂಥ ಭಾರಿ ಕಟಕಟೆ
ಭೂಮಾತೆಯ ಈ ಇಂಥ
ಕ್ರೌರ್ಯ ಪ್ರಶ್ನಿಸಲು
ಶಿಕ್ಷಿಸಲು…?
ತಣ್ಣಗೆ ಹರಿವ ಆಕ್ರಂದನ ಗೀತೆ