ಕಾವ್ಯ ಸಂಗಾತಿ
ಪ್ರೇಮಕ್ಕೆಷ್ಟು ಮುಖಗಳೋ
ಪದ್ಮಜಾ ಜೋಯ್ಸ್
1) ಹಾಸಿಗೆಯ ಚಾದರದ ಮುದುರು
ಒಪ್ಪಗೊಳಿಸುತ್ತಿದ್ದೆ ಅಷ್ಟೇ
ನಿನ್ನ ಪ್ರಣಯದ ಚೇಷ್ಟೆಗಳು
ರಸಿಕ ತುಂಟಾಟಗಳು ನೆನಪಿಗೆ ಬಂತು
ಕಿಬ್ಬೊಟ್ಟೆಯಾಳದಲಿ ಕನಲಿದ್ದು
ನಿನ್ನೊಲವಿನ ಮಿಲನದ ಕನವರಿಕೆ,
. ಅಡಿಗೆ ಮನೆಯಲಿ ನಿನ್ನಿಷ್ಟದ ಸಿಹಿ
ತಯಾರಿಯಲ್ಲಿದ್ದೆ ಅಷ್ಟೇ
ಹೆಜ್ಜೆಜ್ಜೆಗೂ ತೊಡರಿಕೊಳ್ಳುವ
ಹಿಂದಿಂದೆ ಬಂದು ಬಳಸಿಬಿಡುವ
ನಿನ್ನ ತುಂಟಾಟಗಳು ಸ್ಮರಣೆಗೆ ಬಂತು
ತನುಮನಗಳಲಿ ಉರಿ ಎಬ್ಬಿಸಿದ್ದು
ನಿನ್ನೊಲವಿನ ಮಿಲನದ ಕನವರಿಕೆ
ಮನೆಯ ವರಾಂಡ ಓರಣಗೊಳಿಸಿ
ಜೋಡಿಸುತ್ತಿದ್ದೆ ಅಷ್ಟೇ
ಅದೆಲ್ಲಿಂದಲೋ ನಿನ್ನ ಅಪ್ಪುಗೆ
ಸತಾಯಿಸುತ್ತಲೇ ಮುದ್ದಿಸುವ
ನಿನ್ನ ಹುಡುಗಾಟಗಳು ಕಣ್ಮುಂದೆ ಬಂತು
ಶರೀರದಾದ್ಯಂತ ಕಂಪನ ತರಿಸಿದ್ದು
ನಿನ್ನೊಲವಿನ ಮಿಲನದ ಕನವರಿಕೆ
2)
ಅವನ ಮೇಲೆ ಅದೆಷ್ಟು ಕವಿತೆ ಹೆಣೆಯುತ್ತಿ
ಪ್ರಣಯ ಶೃಂಗಾರ ಬೆಸೆದು ಕಾಡಿಸುತ್ತಿ
ಮನವೇ ಅವನು ಜೀವವಿಲ್ಲದ ಅಕ್ಷರವಲ್ಲ,
ಉಸಿರೆತ್ತಿ ದನಿಯಾದರೆ
ಶೃತಿ ರಾಗ ತಾಳ ಸೇರಿದರೆ
ಇಂಪಾದ ಸಂಗೀತವಾಗಬಲ್ಲ....
ಅವನ ಮೇಲೆ ಅದೆಷ್ಟು ಕಥೆ ಕಟ್ಟುತ್ತಿ
ರಸ ರಮ್ಯ ಕಾದಂಬರಿ ಹುಟ್ಟು ಹಾಕುತ್ತಿ
ಮನವೇ ಅವನು ನಿಶ್ಶಬ್ಧ ಪದಗಳಲ್ಲ
ಯಕ್ಷ ಗಂಧರ್ವ ಮೇಳೈಸಿದ
ಕಿನ್ನರ ಕಿಂಪುರುಷ ಸೇರಿಸಿದ
ಅದ್ಭುತ ಪ್ರೇಮಗ್ರಂಥವಾಗಬಲ್ಲ...
ಅವನ ಮೇಲೆ ಅದೆಷ್ಟು ಹೋಲಿಕೆ ಪೇರಿಸುತ್ತಿ
ನಿಸರ್ಗ ರಮಣೀಯ ವರ್ಣನೆ ಜೋಡಿಸುತ್ತಿ
ಮನವೇ ಅವನು ಸ್ತಬ್ದ ಚಿತ್ರಗಳಲ್ಲ
ಇಂದ್ರಧನುಸ್ಸಿನ ಸಪ್ತ ವರ್ಣಗಳ
ಹೋಳಿ ಹುಣ್ಣಿಮೆಯ ಹಲವುರಂಗುಗಳ
ಬೆರಸಿ ರಚಿಸಿದ ಜೀವಂತ ಕಲಾಕೃತಿಯಾಗಬಲ್ಲ..
ಅವನ ಮೇಲೆ ಅದೆಷ್ಟು ಕನಸು ಕಾಣುತ್ತೀ
ಬದುಕ ಪಯಣದ ಆಸೆಗಳ ಮಾಲೆ ಮಾಡುತ್ತಿ
ಮನವೇ ಅವನು ಸಂಜೆಗೆ ಬಾಡುವ ಹೂವಲ್ಲ
ದೇವವನದ ಪಾರಿಜಾತವಿರುವ
ನಂದನವನದ ಮಂದಾರವಿರುವ
ಬಯಕೆ ಭರವಸೆಯ ಪುಷ್ಪ ಪ್ರತೀಕವಾಗಬಲ್ಲ,
ಅವನೆಂದರೆ ಸಂಗೀತಕ್ಕೆ ಸ್ವರ
ಅವನೆಂದರೆ ಸಾಹಿತ್ಯಕ್ಕೆ ಪದ
ಅವನೆಂದರೆ ಶಿಲ್ಪಕ್ಕೂ ಕಳೆ
ಅವನೆಂದರೆ ಇಳೆಗೆ ಮಳೆ,
ಅವನೆಂದರೆ ಜೀವದೊಲವ ಕಲೆ
3)
ಸೆರೆಮನೆಯಂತ ಗೋಡೆಯಲೂ ಬಾಗಿಲಿತ್ತು
ಅರಮನೆಯ ನಿನ್ನಂತಪುರಕ್ಕೆ ಸುರಂಗವಿತ್ತು
ಎಲ್ಲಾ ಎಲ್ಲೆ ಮೀರಿ ನಿನ್ನ ಸೆಳೆದ ನನ್ನ ತ್ಯಾಗದ
ನನ್ನನುರಾಗ ನಿನ್ನನೂ ಇನ್ನಿಲ್ಲದಂತೆ ಕಾಡಿತ್ತು,
ಕಟ್ಟುಪಾಡು ನೀತಿನಿಯಮ ಶಾಪ ಭಯ
ಅಧಿಗಮಿಸಿ ಮೌನ ಪ್ರೇಮದ ಅವ್ಯಕ್ತ ಒಲವ
ಅರಸಿ ನೀ ನನ್ನೆಡೆಗೆ ದಾವಿಸಿ ಬಂದಿದ್ದೆ
ನಿನ್ನದೇ ಪ್ರಮಾಣ ವಚನಗಳ ತೊಡೆದು
ಕುಸಿಯುತ್ತಿರುವ ಮನಕ್ಕೆ, ಕಳೆದೋಗಿರುವ
ಬದುಕಿಗೆ ಭರವಸೆಯಾಗಿದ್ದೆ,
ಪ್ರೇಮಿಯೊಬ್ಬನ ಅದಮ್ಯವಾದ
ಯುಗಯುಗಗಳಿಗೂ ಮಾದರಿಯಾದ
ಪ್ರೇಮಕ್ಕೂ ಸಾಕ್ಷಿಯಾಗಿದ್ದೆ
ಅರೆಮಂಪರ ಕರಿಯಿರುಳ ಕನಸುಗಳ
ಸಾಕಾರವಾಗಿ ಕಣ್ಣೆದುರು ನಿಂತಿದ್ದೆ,
ಧರೆಗಿಳಿದವಳಿಗೆ ಬಾಹುಗಳಲ್ಲೆತ್ತಿ
ಜೀವಕ್ಕೇ ಆಸರೆಯಾಗಿದ್ದೆ,
ಅಂದಿನಿರುಳು ಕಳೆದ ಕ್ಷಣಗಳು
ನುಡಿದ ಮಾತುಗಳು ಸವಿದ ಸಾಮಿಪ್ಯ
ನಿನ್ನೆದೆಯ ಕಾರಾಗೃಹದಲ್ಲಿ ಅಜೀವ
ಸೆರೆಯಾಳಾಗಿ ಬಂಧಿಸಿಬಿಟ್ಟಿತ್ತು.....
----------------------------------