ಡಾ. ಪುಷ್ಪಾ ಶಲವಡಿಮಠ

ವ್ಯಾಲಂಟೈನ್ ವಿಶೇಷ

ಡಾ. ಪುಷ್ಪಾ ಶಲವಡಿಮ

ನಿಬ್ಬೆರಗು

ಆ ಸೂರ್ಯನಿಗೆ
ಮೂಡಿ ಮುಳುಗುವುದರಲ್ಲೇ
ಹೊತ್ತು ಹೋಗುತ್ತದೆ

ಈ ಸೂರ್ಯನಿಗೆ
ಜನರ ಕಣ್ಣ ಬಣ್ಣಗಳೊಂದಿಗೆ
ಬೆರೆಯುವುದೇ ಜೀವನವಾಗಿದೆ.

ಯಾರು ಹೆಚ್ಚು?! ಯಾರು ಮೆಚ್ಚು ?!
ಗ್ರಹಿಕೆಗೆ ನಿಲುಕಲಾರದ
ಪ್ರಶ್ನೆಗಳ ಮಧ್ಯೆ ಒದ್ದಾಟ.

ಮುಚ್ಚಿದ ಬಾಗಿಲು
ಹಾಕಿದ ಆಗುಳಿಗಳಿದ್ದರೂ
ಸದ್ದಿಲ್ಲದೇ ತೂರಿ ಬರುವ
ಇವನ ಗದ್ದಲವಿಲ್ಲದ ಬೆಳಕಿಗೆ
ಜಗವೇ ನಿಬ್ಬೆರಗು!

ಗೊತ್ತಿಲ್ಲದಂತೆ ಗತ್ತಿನಲ್ಲೇ
ಮನದ ಕದವ ತಳ್ಳಿ
ನಗುತ ಬರುವ
ಮೋಡಿಗಾರನ ಮೋಡಿಗೆ
ವಶವಾಗುತಿಹ ಮಾನಸ ಲೋಕದ
ತಲ್ಲಣಗಳ ತಣಿಸಲೋಲ್ಲದೇ
ಮೂಕವಾಗಿವೆ ತರ್ಕ ವಿತರ್ಕಗಳು.

ಅಲ್ಲಿ ಪದವಿಟ್ಟವನು
ಪದಪಲ್ಲವಿ ಕಟ್ಟುತ್ತಿದ್ದರೆ
ಇಲ್ಲಿ ಪಲ್ಲವಿಸುತ್ತಿದೆ
ಎಲೆಯಮರೆಯ ಪುಷ್ಪ
ಭಾವವೇಷ್ಟೋ?! ಬಣ್ಣವೆನಿತೋ?!
ಬಲ್ಲವರಾರು?!
ಎಣಿಸ ಹೋದರೆ ತಪ್ಪುತ್ತಿದೆ ಲೆಕ್ಕಾಚಾರ
ಒಗಟು ಒಗಟಾಗಿದೆ
ಕೆನ್ನೆ ಕೆಂಪಿನಲಿ ಗುಟ್ಟು ರಟ್ಟಾಗಿದೆ.

ಮಾರ್ಧವತೆಯ ಮೃದು ಮಾತಿನಲಿ
ಮನವ ಸೆಳೆದು
ಮೋಹನ ಮುರುಳಿಯನೂದುತ ಕರೆದರೆ!!
ಬೆಳೆಸಿದಂತೆ ಬೆಳಕಿನೂರಿಗೆ ಪಯಣ.

ಚಲುವಾ!
ಚಲುವ ನಗೆಯ ಬಲೆಯಲಿ
ಎನ್ನ ಬರಸೆಳೆದು
ಅಯ್ಯೋ ಎಳೆದೊಯ್ಯುತಿಹ!

ಒಯ್ಯಲಿ ಬಿಡು
ನಿರ್ಜಿವ ಜಗತ್ತಿನಲ್ಲಿ
ಉಸಿರಾಡುವುದಕ್ಕಿಂತ

ನಗೆಯ ಬಲೆಯಲ್ಲಿ
ಸೆರೆಯಾಗುವುದೇ ವಾಸಿ!


One thought on “ಡಾ. ಪುಷ್ಪಾ ಶಲವಡಿಮಠ

Leave a Reply

Back To Top