ವ್ಯಾಲಂಟೈನ್ ವಿಶೇಷ
ಬೆಂಶ್ರೀ ರವೀಂದ್ರ
ಒಡಲ ಪ್ರೀತಿ
ಹಿಮಾಲಯದೆತ್ತರದೇಣುಗಳ
ತೆಳುರೆಂಬೆಯ ನುಣಪು ತೊಗಟೆಯ
ಭೂರ್ಜಪತ್ರವನೆಲ್ಲಿ ಅರಸಲಿ ಹುಡುಗಿ
ಅವೆಲ್ಲ ಆಗಲೆ ಚರ್ಮ ಸುಲಿಸಿಕೊಂಡು ಕರಕಾಗಿವೆ
ಹೋಗಲಿ
ತಾಳೆಯೋಲೆಗಳ ಮೇಲೆ ನನ್ನೆದೆ ದೌತಿಯ
ಮಸಿಯಾರುವ ಮುನ್ನವೆ ಬಿಡಿಸುವೆ
ಬಂಧುರ ಭಾವಗಳನೆನಲು ಅದೆಲ್ಲಿವೆ
ತಾಳೆ ಸೇಂದಿಯಂಗಡಿಯ ಸರಕಾಗಿವೆ
ಮೇಘ ಸಂದೇಶಗಳು ಹಂಸೆಯ ಅಂಚೆಗಳು ನಿರ್ಭಾವುಕ ಕವಿಗಳ ಪಾಂಡಿತ್ಯದ
ಗೀಟು ಗಿಲೀಟುಗಳಾಗಿವೆ
ಈಗಿಲ್ಲಿ ಬಿದ್ದಿದೆ ರಾಶಿ ರಾಶಿ ತರತರದ ಕಾಗದ
ಕೋರಿಕೆಯಿದು ಆಗದಿರಲಿ ಕೋರಿ ಕಾಗದ
ನನ್ನದೊ ಕಾಪಿ ಬರೆದಿಲ್ಲದ ಸೊಟ್ಟಪಟ್ಟ ಅಕ್ಷರಗಳು ನಿಂತಿವೆ ಕೋಳಿಕಾಲುಗಳಮೇಲೆ
ಕಾಗುಣಿತಕೆ ಮನ್ನಾ ಮಾಡಿ ಓದಿಕೊ
ಬೇಡವೆಂದರೆ
ಈಗೆಲ್ಲ ಜಟ್ಪಟ್ ಅಂತ ಸೆಟ್ ಆಗೊ ಕಾಲ
ನವಿರು ಅಕ್ಷರಗಳ ಬದಿಗಿರಿಸಿ
ಒಱಲಿ ಬಿಡುವೆ ಮಧುರ ಭಾವಗಳ
ನನಗೆ ತಿಳಿದ ದನಿತಂತುಗಳಲಿ
ಚಚಿತ್ರ ಪರದೆಯಲಿ ಮುದ್ದಿಸಲಾಗದ
ನಿನ್ನ ಮುದ್ದುಮೊಗವ ತೋರಿದರೆ
ಅದಷ್ಟು ತಂತ್ರೋಪತಂತ್ರಗಳಿವೆ
ಓಲೈಕೆಯ ಓಲೆಗೆ
ಆದರೆನ್ನ ಮಾತುಗಳು ನಿಂತು ಬಿಟ್ಟಿವೆ ಹೋಗಲಾರದೆ ಒಳಗೆ
ಹಾಲೆಯ ಕೆಳಗೆ ಓಲಾಡುವ ಜುಮಕಿಯಂತೆ
ಕಾಲವೆಷ್ಟೋ ಸರಿದು ಹೋಯಿತು
ಮಳೆಯೆಷ್ಟೊ ಸುರಿದು ಹೋಯಿತು
ರವಿ ಆವಿಯಾಗಿಸಿದ
ನೀರಚಕ್ರವೆಷ್ಟೊ ಸುತ್ತಿಬಿಟ್ಟಿತು
ಅಕ್ಷರಗಳನೆಷ್ಟೊ ಕೂಡಿ ಹಾಕಿದೆ
ಅವು ಹಾಡಲಿಲ್ಲ
ಚಿತ್ರಗಳನೆಷ್ಟೋ ಬಿಡಿಸಿ ಇಟ್ಟೆ
ಅವು ರಂಗೇರಲಿಲ್ಲ
ಹಾಡುಗಳನೆಷ್ಟೋ ಹಾಡಿದೆ
ಅವು ಹಿತವೆನಿಸಲಿಲ್ಲ
ಇನ್ನು ಹೇಗೆ ಅಭಿವ್ಯಕ್ತಿಸಲಿ ಒಡಲ ಪ್ರೀತಿ
ಈಗ ನೀನೆಲ್ಲಿರುವೆ
ಬುವಿಯಲ್ಲೊ ಬಾನಿನಲ್ಲೋ
ನಕ್ಷತ್ರ ನಿಹಾರಿಕೆಯಲ್ಲೂ
ತಪ್ಪಿಸಿಕೊಳ್ಳಲಾರೆ ಎಲ್ಲಿ ಹೋದರೂ
ವಿಶ್ವ ಚಿಕ್ಕದಿದೆ ಹುಡುಗಿ
(ನೀನೆಂದೂ ಮುದಿಯಾಗುವುದಿಲ್ಲ ಬಿಡು!)
ಆದಿಯೂ ಇಲ್ಲ ಅನಂತವೂ ಇಲ್ಲ
ಮಿಗಿಲಾಗಿ ನಿನ್ನದೆಯ ಗೂಡಿನಲಿ ಮಿಡಿವ ಒಳದನಿಯ ಮೊರೆತ ಕೇಳು ಸುಳ್ಳಾಡದೆ
ಯಾರೂ ನಮ್ಮನ್ನು ಹುಟ್ಟಿಸಲಿಲ್ಲ
ಯಾರೂ ನಮ್ಮನ್ನು ಸಾಯಿಸಲಾರರು
ಹುಟ್ಟು ಸಾವನು ಉಡಿಯಲಿಡದ ತುಡಿತವಿದು
ಹರಿಸಿಬಿಡು ನಮ್ಮೆದೆಯ ಪಸೆಗೆ ಮತ್ತಷ್ಟು ಜೀವರಸ
ಹೂವುಗರಳಿ ತೂಗಿ ತೊನೆಯಲಿ
ಗಾಳಿಯೊಡಗೂಡಿ ಹಾಡಲಿ
ಕೇಳುವಂತೆ ಕಂಪತೂರಿ.
ಚಂದದ ಪ್ರೇಮ ನಿವೇದನೆ❤️
ಸೊಗಸಾದ ಕವನ.ಅಭಿನಂದನೆಗಳು
ಸುಂದರ ಕವನ. ನೀರಚಕ್ರ, ರಂಗೇರದ ಹಾಡುಗಳು, ನಿನ್ನೆದೆಯ ಗೂಡಿನಲಿ ಮಿಡಿವ…..
ಇವೇ ಮೊದಲಾದ ಕಲ್ಪನೆಗಳು ಆನಂದ ನೀಡುತ್ತದೆ
ಎಂಎಸ್ಎನ್
ಸೊಗಸಾಗಿದೆ.
ಶ್ರೀ ರವೀಂದ್ರ ಸರ್ ಗೆ, ಅನಂತ ಅಭಿನಂದನೆಗಳು. ನಿಮ್ಮ ಶ್ರಮ ಸಾರ್ಥಕ ಮತ್ತು ಅಭಿ ನಂದನಿಯ. ಯುವಕರಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಿಗಳು. ಕವನ ಸಂಕಲನಗಳು ಬಹಳ ಉತ್ತಮ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ. ಧನ್ಯವಾದ. ತಡ ಕಲ
ಸುಂದರ ಕವಿತೆ, ಆಳವಾಗಿದೆ ಪ್ರೇಮ ನಿವೇದನೆ. ಅರ್ಥ ಅನಂತವಾಗಿದೆ ಈ ನಿಮ್ಮ ನಿವೇದನೆಯಲ್ಲಿ.