ವಿನುತಾ ಹಂಚಿನಮನಿ

ವ್ಯಾಲಂಟೈನ್ ವಿಶೇಷ

ವಿನುತಾ ಹಂಚಿನಮನಿ

ನಾ ಕಾಯುತಿರುವೆ….

Two Swans on a misty lake

ನೀ ಬರುವೆ ಎಂದು
ಬಾಗಿಲು ತೆರೆದಿಟ್ಟು
ಕಿಟಕಿಯ ಹಿಂದೆ ನಿಂತು
ಗೋಡೆಯ ಗಡಿಯಾರದ
ಕಡೆಗೆ ಒಂದು ಕಣ್ಣಿಟ್ಟು
ನಾ ಕಾಯುತಿರುವೆ

ಬಾಗಿಲ ಮುಂದಿನ ಹಾದಿಯ
ಮೇಲೆ ಇನ್ನೊಂದು ಕಣ್ಣು
ಓಡುವ ಕಾರಿನ ರಭಸದ ಶಬ್ದ
ಚಲಿಸುವ ಗಾಳಿಯ ವೇಗ
ನೀ ಬರುವ ಸುದ್ದಿ ತರುವವೆಂದು
ಕಿವಿಗಳ ತೆರೆದಿಟ್ಟು ನಾ ಕಾಯುತಿರುವೆ

ನಿನ್ನಿಷ್ಟದ ಅಡುಗೆ ಕಾಯುತಿದೆ
ನಿನ್ನ ಉಸಿರಿನ ಗಂಧ ಇಲ್ಲಿದೆ
ಮನೆಯ ಮೂಲೆ ಮೂಲೆಗಳು
ಪ್ರತಿಧ್ವನಿಸಿವೆ ನಿನ್ನ ಮಾತುಗಳ
ಕಾತರದಿ ಕಾಯುತಿದೆ ನೀ ಮೆಟ್ಟಿದಂಗಳ
ನೀ ಬರುವೆಯೆಂದು

ಹೂ ಗಿಡಗಳು ಹಣಿಕಿ ಹಾಕಿ
ಕೇಳುತಿವೆ ನೀ ಬರುವೆಯೆಂದು
ನಿನ್ನ ವಸ್ತ್ರಗಳು ಸಾಲು ಸಾಲಿನಲಿ
ಅರ್ಧ ಓದಿದ ಪುಸ್ತಕ ಪುಟ ತೆರೆದು
ಸ್ಪರ್ಷಕೆ ಕಾದಿರುವ ವಸ್ತುಗಳು
ಕಾಯುತಿವೆ ನೀ ಬರುವೆ ಎಂದು

ಮನದ ಮೂಲೆಯಲಿ
ಆಸೆಯ ದೀಪ ಹಚ್ಚಿಟ್ಟು
ದಿನದಿನವೂ ಸೋಲುವ
ಭರವಸೆಯ ಬಚ್ಚಿಟ್ಟು
ಕಾಡುವ ಪ್ರಶ್ನೆಗಳ
ಚಿಂತೆಗಳ ಮೂಟೆ ಕಟ್ಟಿಟ್ಟು
ನಾ ಕಾಯುತಿರುವೆ
ನೀ ಬರುವೆಯೆಂದು

ಮಿಂಚುವ ನಕ್ಷತ್ರಗಳಲಿ
ನಿನ್ನ ಕಣ್ಣುಗಳ ಹೊಳಪು ಹುಡುಕುವೆ
ಮಂದವಾಗಿ ಬೀಸುವ ಗಾಳಿಯಲಿ
ನಿನ್ನ ಉಸಿರಿನ ಗಂಧ ಅರಿಸುವೆ
ತರಗಲೆಗಳ ಸರಸರ ಸದ್ದನು
ನಿನ್ನ ಹೆಜ್ಜೆಸದ್ದು ಎಂದು ಭ್ರಮಿಸುತ
ಕೇಳಿ ಬರುವ ದನಿ ನಿನ್ನದಾಗಿರಲಿ
ಎಂದು ಇಚ್ಛಿಸುತ ನಾ ಕಾಯುತಿರುವೆ
ನೀ ಬರುವೆಯೆಂದು

ನಾ ಜಗ ಬಿಡುವ ಮೊದಲು
ಕಾಣುವೆನೇ ನಿನ್ನನೊಮ್ಮೆ
ಕಳೆಯದ ಸಮಯದ
ನಿರಾಸೆಯ ಹೂತಿಟ್ಟು
ಚಾತಕ ಪಕ್ಷಿಯಂತೆ
ನಾ ಕಾಯುತಿರುವೆ
ನೀ ಬರುವೆ ಎಂದು

ಹೋಗುವ ಮೊದಲು
ವಿದಾಯ ಹೇಳಲಿಲ್ಲ
ಅರ್ಧ ಶತಮಾನ ಕೂಡಿ ಬಾಳಿ
ಒಂದು ಮಾತು ಹೇಳದೆ ಹೋದೆಯಲ್ಲ
ಅದಕಾಗಿ ನೀ ಬರುವೆ ಎಂದು
ನಾ ಕಾದಿರುವೆ ನಾ ಕಾಯುತಿರುವೆ

ಇನ್ನೆಷ್ಟು ದಿನ ಕಾಯಬೇಕೋ
ಅರ್ಥವಿಲ್ಲದ ದಿನ ಮುಂದೂಡಬೇಕೋ
ನೀನಾದರೂ ಬಾ ಇಲ್ಲವಾದರೆ
ನನ್ನನ್ನಾದರೂ ಕರೆದುಕೊ
ಅಂತ್ಯಗೊಳಿಸು ಅನಂತ ವಿರಹವ
ನಾನಿನ್ನು ಕಾಯಲಾರೆ


10 thoughts on “ವಿನುತಾ ಹಂಚಿನಮನಿ

  1. ಕಾಯುವುದರಲ್ಲಿ ಇರುವ ದುಃಖ ದುಮ್ಮಾನ
    ಅವನು ಬಂದ ಮೇಲೆ…..?

  2. *ಮನಮುಟ್ಟುವ ಕವಿತೆಯ ಸಾಲುಗಳು ಮೇಡಂ.. ಅಭಿನಂದನೆಗಳು*

  3. ಮನಸ್ಸಿನ ಭಾವನೆಗಳು ತಮ್ಮ ಅಂತರಂಗದಿಂದ ಹೊರಹೊಮ್ಮಿವೆ. ನಿಜಕ್ಕೂ ಅರ್ಥ ಪೂರ್ಣ ಸಾಲುಗಳು ಮೇಡಮ್.

Leave a Reply

Back To Top