ಇಮಾಮ್ ಮದ್ಗಾರ ಕವಿತೆ-ಬಂದುಬಿಡು

ಕಾವ್ಯ ಸಂಗಾತಿ

ಬಂದುಬಿಡು

ಇಮಾಮ್ ಮದ್ಗಾರ

ನನ್ನೆದೆಯ ಒಲವಿನೆಲಕೆ ಬಾಯಾರಿದೆ
ನೀನೀರ ಹನಿ‌ಸಿಂಪಡಿಸು ಮುಗಿಲಿನಂತೆ ಒಣಗಿದೊಲವಿನಲಿ

ಉಕ್ಕಲಿ ಪ್ರೀತಿ ಧರೆಚಿಮ್ಮಿ ಬರುವ ಸೆಲೆಯಂತೆ

ಹೆದರುವ ದೇಕೆ ಆತುಬಿಡು ಪ್ರೀತಿಯ ಭುಜಕೆ
ಹಳೆಯ ನೆನಪುಗಳ ಸ್ಮರಿಸಿಕೊಂಡು
ನೆನಪ ನೋವಿನ ಮೇಘ ಬರುವದು ಬೇಡ ನಿನ್ನಟ್ಟಿ ಕೊಂಡು

ಕರಿಯ ಕಾರ್ಮೋಡದಲಿ ಬೆಳದಿಂಗಳು ಬಂದಂತೆ
ಸಾಗರ ದಂಚಿನಲಿ ಅಲೆ ಬರುವಂತೆ
ಬಂದುಬಿಡು ನೀನು ಚಂದದ ಚೈತ್ರದಂತೆ

ಸತ್ತುಹೋದ ಕನಸುಗಳ
ನೆನಪ ನಾ ನೆನಪಿಸುವದಿಲ್ಲ
ನನ್ನ ಸಹನೆಯ ನಿನಗೆ
ಪರಿಚಯಿಸುವ ದಿಲ್ಲ
ಜಾತಿಯ ಖೌದಿಯಲಿ
ಪ್ರೀತಿಕೊಚ್ಚಿ ಮುಚ್ಚಿದ್ದು
ನಾ ಕೇಳುವದಿಲ್ಲ

ಬಂದುಬಿಡು ನೀಬರುವ
ಹೆಜ್ಜೆಸದ್ದು ನನಗಷ್ಟೆ ಕೇಳುವದು
ಭಯಬೇಡ ಭಂಡ ಸಮಾಜದ ಬಗ್ಗೆ
ಲಜ್ಜೆಗೆಟ್ಟು ಕಾಯುತ್ತೆನೆ
ಬಂದುಬಿಡು ನನ್ನೆದೆಯನೆಲಕೆ
ಬಾಯಾರಿದೆ


Leave a Reply

Back To Top