ಕಾವ್ಯ ಸಂಗಾತಿ
ಪಾಪದ ಹೂವು
ವಿಜಯಶ್ರೀ ಎಂ. ಹಾಲಾಡಿ
ತನ್ನ ಮೈಯ್ಯ ವಾಸನೆಯನ್ನೆ
ದ್ವೇಷಿಸುವ ಮನುಷ್ಯ
ಏನನ್ನು ತಾನೇ ಪ್ರೀತಿಸಬಲ್ಲ!
ಪ್ರೇಮಗಳು ಮುರಿದು ಬೀಳುತ್ತವೆ
ವಿರಹದ ಉರಿಯಲ್ಲಿ ಬೇಯುವ
ಜೀವಗಳು ದಿನವೂ ಗೋಳಿಡುತ್ತವೆ..
ಮದುವೆಗಳು ಅತ್ತ ಮುರಿಯಲೂ
ಆರದೆ ಇತ್ತ ನೆಮ್ಮದಿಯೂ ಕಾಣದೆ
ಬಂಧೀಖಾನೆಗಳಾಗಿ ನರಳುತ್ತವೆ
ತನ್ನ ತಪ್ಪುಗಳನ್ನು ಕ್ಷಮಿಸುವ
ವಂಚನೆಗಳಿಗೆ ಬಣ್ಣ ಲೇಪಿಸಿ
ಮುಚ್ಚಿಡುವ ಮನುಷ್ಯನಿಗೆ
ಇನ್ನಿತರರ ನಡೆನುಡಿ
ನಿರಂತರ ದೋಷ, ಪ್ರಶ್ನಾರ್ಹವಾಗಿದೆ!
ಸಂಶಯಿಸುವ, ಕೊರಗುವ
ತನ್ನ ನೆರಳಿಗೆ ತಾನೇ ಹೆದರುವ
ತನ್ನ ಭಾನಗಡಿಗಳ ಹೊಲಸಲ್ಲಿ
ಬಿದ್ದು ಮುಳುಗಿಹೋಗುವ ಮನುಷ್ಯ
ನಿಸರ್ಗವನ್ನೂ ಬಿಡಲಾರ
ಮುಗ್ಧ ಜೀವಜಂತುಗಳಿಗೆ
ದ್ರೋಹ ಬಗೆದು
ಸುಖವೆಂಬ ಮರೀಚಿಕೆಯ
ಬೆನ್ನಟ್ಟಿ ಓಡುವ ಈ ಪ್ರಾಣಿ
ಪ್ರಕೃತಿಯ ಕುಲುಮೆಯಲ್ಲಿ
ಬೆಂದು ಅರಳಬೇಕಾದ
ಪಾಪದ ಹೂವು!