ಸಂತೆಬೆನ್ನೂರು ಫೈಜ್ನಟ್ರಾಜ್- ದ್ವಿಪದಿಗಳು

ಕಾವ್ಯ ಸಂಗಾತಿ

ದ್ವಿಪದಿಗಳು

ಸಂತೆಬೆನ್ನೂರು ಫೈಜ್ನಟ್ರಾಜ್


1

ಎಷ್ಟು ಎತ್ತರ ಹಾರಿದರೇನು ಹಕ್ಕಿ ತಾ ಪ್ರೀತಿ ಹೊತ್ತು ಗಾಳಿಗೆ
ಹಾರಿದಂತೆ ಅದುವೆ ಮತ್ತಿಳಿಯಲೇಬೇಕು ಮಣ್ಣ ಮೇಲಿನ ಕಾಳಿಗೆ
2

ಮರೆತು ಬಿಡು ಗೆಳೆಯ ನಾ ಎಂದೋ ಆಡಿದ ಬಿರು ನುಡಿಯ
ಎಡವಿದ್ದು ನಾಲಗೆ ನೊಂದಿದೆ ಮನ ಹೊತ್ತಿಸಲು ಬಿಡದಿರು ಕಿಡಿಯ
3
ನಮ್ಮೂರಲ್ಲಿ ಎರೆಡು ಮಸೀದಿ ಸತ್ಯವೆಂದರೆ ಅಲ್ಲಾ ಒಬ್ಬನೆ
ನಾ ಮೇಲು ನಮ್ಮದೇ ಮೇಲು ಅನ್ನೋ ಮಂದಿ ನಡುವೆ ನಾನೊಬ್ಬನೆ
4
ಪ್ರೀತಿಯದು ಕೊಟ್ಟ ಸಾಲ ಮತ್ತೆ ನೀ ಮರಳಿಸಲು ಬೇಕು
ಕೊಟ್ಟಿದುದಕೆ ಸೇರಿಸಿ ಕೊಡು ಆಗ ನೋಡು ಮನದ ಬೆಳಕು!
5
ಅದೇ ಬಾನು ಅದೇ ಭೂಮಿ ಅದೇ ಬೆಳಕೆಂದು ಇರುವುದನೆ ಜರಿಯುವುದು ತರವೆ
ದೇಹ ಹಳತು ಅಂಗಿ ಹೊಸತು ಅಂತೆ ನೀ ಬದಲಾಗು ಇದ್ದಂತಿದೆ ಜಗದ ಗೊಡವೆ
6
ಎಲೆಗು-ಹನಿಗು ಬಿಡದ ನಂಟು ಬಿಸಿಲ ಕಿರಣ ಬೀಳುವ ತನಕ
ಮತ್ತೆ ನಾಳೆಗೆ ನಿರೀಕ್ಷೆ ಎಡಬಿಡದ ಒಲುಮೆಗೆ ಬೇಡ ಧನ-ಕನಕ!
7
ಮಣ್ಣೊಳಗಿನ ಕತ್ತಲಿಗೆ ಹೆದರಿದ್ದರೆ ಬೀಜ- ಆಗುತ್ತಿತ್ತೇ ಸಸಿ
ಬಂದದ್ದನ್ನೆಲ್ಲಾ ಹೀರಿ ಬೆಳೆದಾಗ ಒಡಲೊಳಗೊಂದು ಖುಷಿ
8
ಗ್ರಂಥಾಲಯದ ಲಾಭ ನಿಜಕ್ಕೂ ಪಡೆದುಕೊಂಡಿದ್ದು ಕಪಾಟಿನ ಹುಳ
ನಾವು-ನೀವು ಏನೇ ಬರೆದರೂ ಇಂದು ನಕ್ಕು ನಾಳೆ ಉದುರೋ ಹೂ-ದಳ!
9
ಬೇಲಿ ಹಾಕಿದಷ್ಟು ಹಾರಿ ಹಾರಿ ಬರುತಿವೆ ಕುರುಡು ಕನಸುಗಳು
ಬಲವಂತದ ಕಾವ್ಯದಂತೆ ಒಲ್ಲದ ಗರ್ಭ ಹೊತ್ತು ತಿರುಗೋ ಒಡಲುಗಳು!


4 thoughts on “ಸಂತೆಬೆನ್ನೂರು ಫೈಜ್ನಟ್ರಾಜ್- ದ್ವಿಪದಿಗಳು

    1. ಪ್ರೀತಿ ಹಿಂದಿರುಗಿಸಿದರೆ ಬದುಕೂ ಬೆಳಗೂ
      ಉತ್ತಮ ನೀತಿ ಸಾಲುಗಳು ಸಹೋದರ

    2. ನಿನ್ನಂತರಾಳದಲಿ ಹೊಳೆಯುವ ಮಿಂಚು ಹುಳು ನೀ
      ಮಿನುಗುತಿರುವೆ ಎದೆಯೊಡಲ ಮಿಡಿದಲ್ಲಿ
      ನುಡಿ ಕಾಣದೆ ಎಷ್ಷೋ ನುಡಿಗಳು ಎದೆಯ ಅಂತರಾಳದಲ್ಲಿ

      1. Dr Fool – ನಿನ್ನಂದಕೆ ಸಾಟಿಯಾರು ಈ ಭುವಿಯಲ್ಲಿ
        ನನ್ನ ಮನದ ಮಂದಾರ ಪುಷ್ಪ
        ಸಾಟಿಯಾರು ನಿನ್ನ ಸೌಗಂಧಕೆ

Leave a Reply

Back To Top