ಸುಲೋಚನಾ ಮಾಲಿಪಾಟೀಲ-ಎಷ್ಟ ಚಂದ

ಕಾವ್ಯ ಸಂಗಾತಿ

ಎಷ್ಟ ಚಂದ

ಸುಲೋಚನಾ ಮಾಲಿಪಾಟೀಲ

ಗುಡು ಗುಡು ಗದ್ದರಿಸುವ ಮಳೆಯೊಳಗೆ
ಘಮ ಘಮ ಮಣ್ಣಿನ ವಾಸನೆಯಾಗ
ಗರಂಗರಂ ಭಜಿ ತಿನ್ನುವಾಗ
ಸುಡು ಸುಡು ಚಹಾ ಸಿಕ್ಕರ ಎಷ್ಟ ಚಂದ

ನಳನಳಿಸುವ ಹೂಬಳ್ಳಿಯ ಹಿಂದ
ಗುಜುಗುಜು ಮಾತಿನ ನಡುವೆ
ಕಿಲ ಕಿಲ ನಗುವಿನಲ್ಲಿ ನಮ್ಮಾಕೆಯ
ಲಕ ಲಕ ಹೊಳೆಯುವ ಹಲ್ಲು ಎಷ್ಟ ಚಂದ

ಧಗಧಗ ಉರಿಬಿಸಿಲಿನ ಸೆಕೆಯಲ್ಲಿ
ಗಳಗಳ ಎಷ್ಟು ನೀರು ಕುಡಿದರೇನು
ಚುರು ಚುರು ಉರಿಯುವ ಮೈ ತಂಪಾಗಲು
ಪಟಪಟ ಮಳೆ ಬಂದರ ಎಷ್ಟ ಚಂದ

ಗದಗದ ನಡುಗುವ ಚಳಿಯಲ್ಲಿ
ಜುಳು ಜುಳು ಹರಿವ ನದಿ ದಂಡ್ಯಾಗ
ನಿಗಿ ನಿಗಿ ಬೆಂಕಿ ಹಚ್ಚಿಕೊಂಡು
ಚಟಪಟ ಕಿಡಿ ಸದ್ದಿನಾಗ ಮೈ ಕಾಸೊದು ಎಷ್ಟ ಚಂದ

ವಟವಟ ವಟಗೂಡುವ ಮಕ್ಕಳಿಗೆ
ಕುರುಕುರು ತಿನ್ನಲಿಕ
ಮುರಮುರಿ ಬೆಲ್ಲದ ಉಂಡಿ ಮಾಡಿಕೊಟ್ಟರ
ಕುರಂಕುರಂ ತಿನ್ನಲಿಕ ಎಷ್ಟ ಚಂದ 

ಕಟಕಟ ನಡಗು ಥಂಡ್ಯಾಗ
ಬಿಸಿಬಿಸಿ ಕಾಡೆ ಕುಡುದು
ದಪ್ಪದಪ್ಪ ಕೌದಿ ಹೊಚಗೊಂಡು
ಗಪಚಿಪ್ ಬೆಚ್ಚಗ ಮನಗಿದ್ರ ಎಷ್ಟ ಚಂದ 

ಮುದಿಮುದಿ ಮುದಿಕಿಗ
ಮುಟುಮುಟ ನುಂಗಲಿಕ್ಕ
ಬಿಸಿಬಿಸಿ ರೊಟ್ಟಿಯ ಮುಟುಗಿ ಮಾಡಿಕೊಟ್ರ
ಖುಷಿ ಖುಷಿ ಬಾಯಿ ಆಡಸ್ಯಾಳ ಎಷ್ಟ ಚಂದ

ಗರಗರ ತಿರಗೋ ಬಗರಿಗ
ಭರಭರ ದಾರಾ ಸುತ್ತಿ
ಬಿರಿಬಿರಿ ಬಿಸಿ ಒಗದ್ರ
ಬುರು ಬುರು ಸದ್ದ ಕೇಳಲು ಎಷ್ಟ ಚಂದ

ಕಿಡಿಕಿಡಿ ಬೆಂಕಿಯೊಳಗ
ರುಚಿ ರುಚಿ ಮೆಕ್ಕಿತನಿ ಸುಟ್ಟು
ಹುಳಿ ಹುಳಿ ಲಿಂಬು ಉಪ್ಪು ಹಚ್ಚಿ
ಬಿಸಿಬಿಸಿ ತಿಂದರ ಎಷ್ಟ ಚಂದ


One thought on “ಸುಲೋಚನಾ ಮಾಲಿಪಾಟೀಲ-ಎಷ್ಟ ಚಂದ

  1. ಅಕ್ಕಾ ಎಷ್ಟು ಸುಂದರವಾದ ಜಾನಪದ ಸೊಗಡು ಕನ್ನಡ ನಾಡಿನ ಕನ್ನಡ ಸಾಹಿತ್ಯ ವಿದ್ಯಾ ಕಾಶಿ ಕಲೆಗಳ ಬಿಡು ಕವನಗಳ ನಾಡು ಧಾರವಾಡ ಜಿಲ್ಲೆಯ ಸೊಗಡು ಕವನ ಸಂಕಲನ ಇಂತಹ ಕವನ ಮೇಲ್ಲಿದ ಮೇಲೆ ಬರಲಿ ಎಂದು ಬಯಸುತ್ತೇನೆ ಅಕ್ಕಾ ನಿಮ್ಮ ಕೈಯಿಂದ ನುಡಿ ಮುತ್ತು, ರತ್ನ ಸುರಿಯಲಿ…..

Leave a Reply

Back To Top