ಅರ್ಚನಾ ಯಳಬೇರು-ಗಜಲ್

ಕಾವ್ಯ ಸಂಗಾತಿ

ಗಜಲ್

ಅರ್ಚನಾ ಯಳಬೇರು

ಮೌನದ ಅಲೆ ಅಪ್ಪಳಿಸಿದರೇನು ಒಲವೇ ಅರ್ಥೈಸಬಲ್ಲೆ ನಿನ್ನ ಮನಸ್ಸು
ಪ್ರೀತಿಯು ಅಮೂರ್ತವಾದರೇನು ಒಲವೇ ಅರಿಯಬಲ್ಲೆ ನಿನ್ನ ಮನಸ್ಸು

ಪರಪಂಚ ಎಳೆದ ಪರಿಧಿಯಲ್ಲೂ ಪ್ರಾಂಜಲತೆಯ ಪ್ರತಿರೂಪ ನೀನು
ಭಾವಕೆ ಜೀವ ತುಂಬದಿದ್ದರೇನು ಒಲವೇ ತಿಳಿಯಬಲ್ಲೆ ನಿನ್ನ ಮನಸ್ಸು

ಮನೋಜ್ಞವಾದ ಅನುರಾಗದ ಅನುರಣನಕೆ ಸೋತಿವೆ ಕರ್ಣಗಳು
ಅಭೀಪ್ಸೆಗಳ ಅಡಗಿಸಿದರೇನು ಒಲವೇ ಘೋಷಿಸಬಲ್ಲೆ ನಿನ್ನ ಮನಸ್ಸು

ಹಸನು ಲಾಲಿತ್ಯದಿ ಹದಗೊಂಡ ಅಸ್ಮಿತೆಯು ಅಳುಕುವುದೇಕೆ ಹೇಳು
ಅನುಪಮ ಲಾವಣ್ಯ ಸೋತರೇನು ಒಲವೇ ಗ್ರಹಿಸಬಲ್ಲೆ ನಿನ್ನ ಮನಸ್ಸು

ಪ್ರಜ್ಞೆಯ ಹಾದಿಯಲ್ಲಿನ ‘ಅರ್ಚನಾ’ಳ ನಡೆಯು ದಿಕ್ಕು ತಪ್ಪುವುದುಂಟೇ
ಪ್ರೇಮ ಸೌಧವು ಮುರಿದು ಬಿದ್ದರೇನು ಒಲವೇ ಗೆಲ್ಲಬಲ್ಲೆ ನಿನ್ನ ಮನಸ್ಸು


Leave a Reply

Back To Top