ವಿಷ್ಣು ಆರ್. ನಾಯ್ಕಕವಿತೆ-ಅಜ್ಜನ ಊರುಗೋಲು

ಕಾವ್ಯ ಸಂಗಾತಿ

ಅಜ್ಜನ ಊರುಗೋಲು

ವಿಷ್ಣು ಆರ್. ನಾಯ್ಕ

ನನ್ನಜ್ಜನ
ಊರುಗೋಲು
ಮೂಲೆಯಲ್ಲಿ
ಇಂದಿಗೂ ಜೋಪಾನ.‌‌.
ಅದರೆಡೆ
ದೃಷ್ಟಿಯಿಟ್ಟಾಗ
ಕಣ್ಣ ಕಂಪನ..
ನೂರಾರು ಭಾವಗಳ ಸಮ್ಮಿಲನ..
ಅದು ಇಟ್ಟ ಹೆಜ್ಜೆಗಳು…
ಜೀವಿತದಲ್ಲಿ ಕಂಡ ಅನುಭವ..
ಅದರ ಗಾಯಗಳು..
ರೂಪು ಕಳೆದುಕೊಂಡ ಮೊಗ..
ಇತಿಹಾಸವನ್ನು
ಸಾಕ್ಷೀಕರಿಸುತ್ತದೆ
ಹೇಳಿದಂತಾಗುತ್ತದೆ
ಅದು ಮತ್ತೆ ಮತ್ತೆ ಅನುರಣನ…
ಇಡುವ ಹೆಜ್ಜೆಗಳು ಜೋಪಾನ…

ಅದು
ನಾನಿಡುವ ಪ್ರತಿ ಹೆಜ್ಜೆಗೂ
ಎಚ್ಚರವಾಗಿ…
ಸುಖಕ್ಕೆ ಪ್ರೋತ್ಸಾಹಿಸುವ  ತಾಯಾಗಿ..
ದುಃಖಕ್ಕೆ ಸಂತೈಸುವ ಹಿರಿ ಜೀವವಾಗಿ..
ನನ್ನ ಕಾಯುವ ಕಣ್ರೆಪ್ಪೆಯಾಗಿ…
ದೋಷ ತಿದ್ದುವ ಧರ್ಮರೂಪಿಯಾಗಿ..
ಬದುಕ ಪ್ರೀತಿಸುವ ಸಂವೇದನೆಯಾಗಿ..
ಎಂದಂದಿಗೂ ಇದೆ ನನ್ನಂತರಂಗದ
ಕಣ್ಣಾಗಿ…

ಅಜ್ಜ ನಡೆದ ನಡಿಗೆ
ಕೇಳಿಸುತ್ತದೆ
ಆಗಾಗ….
ಅವರ ಮಾತಿನ ಮೊರೆತ
ಹೆಜ್ಜೆಯ ದೀಂಗುಣಿತ…
ಅದೇ ಸದ್ದು , ಊರುಗೋಲು
ಟಕ್..ಟಕ್…ಟಕ್….
ಪೂರ್ವಜರ ಇತಿಹಾಸದ ಅನಾವರಣ
ಅದು ಅನುಭವದ ಪಾಕಶಾಲೆ
ಎಷ್ಟು ಮೊಗೆದರೂ ಮುಗಿಯದ
ಸಂಪತ್ತಿನ ಕೊಪ್ಪರಿಗೆ
ಹರೆಯದಿಂದ ಮರೆವಿನವರೆಗೆ…
ನಮಿಸುವೆ ನನ್ನನ್ನೇ ನಾ ನೋಡುವ
ಪೂಜ್ಯ ‘ಕನ್ನಡಿ’ಗೆ..


2 thoughts on “ವಿಷ್ಣು ಆರ್. ನಾಯ್ಕಕವಿತೆ-ಅಜ್ಜನ ಊರುಗೋಲು

  1. ಅಜ್ಜನ ಊರುಗೋಲು…ಊರೂರು ಸುತ್ತಿ ಗಳಿಸಿದ ಅನುಭವದ ಅನುಭಾವದ ನಡೆ ನುಡಿ ನಮ್ಮೆಲ್ಲರಿಗೂ ಆದರ್ಶ ಕವನ ತುಂಬಾ ಚೆನ್ನಾಗಿದೆ!ಸರ್ ❤️

  2. ಅಜ್ಜನ ಕೋಲು ಅವರ ಜೊಎಗಿನ ನಿಮ್ಮ ಪ್ರೀತಿಯ ಒಡನಾಟದ ಸಂಕೇತ. ತುಂಬಾ ಮನೋಜ್ಞವಾಗಿ ಮೂಡಿಬಂದಿದೆ.

Leave a Reply

Back To Top