ಕಾವ್ಯ ಸಂಗಾತಿ
ಪ್ರಯೋಗ
ಅನಸೂಯ ಜಹಗೀರದಾರ
ಪ್ರೇಮಕ್ಕೊಂದು ಪ್ರಯೋಗ
ನೀನೋ ಪ್ರಯೋಗಶೀಲ ಚಿಂತಕನೆಂದು
ತಿಳಿಯುವ ಹೊತ್ತಿಗೆ
ಸ್ವತಃ ನಾನು ನಿನ್ನ ಪ್ರಯೋಗಕ್ಕೆ ಸಿಲುಕಿದ್ದೆ.
ಮತ್ತೊಂದನ್ನು ಪ್ರಯೋಗಕ್ಕೆ
ಒಳಪಡಿಸುವವರೆಗೆ
ಅನುಭವಿಸಬೇಕೆಂಬ ಇರಾದೆ
ನಿನ್ನದುಬಿಡು.
ನಿನ್ನ ಪ್ರಯೋಗಶೀಲತೆ
ಸದಾ ಜಾರಿಯಲ್ಲಿತ್ತು
ಎಕ್ಸಪೀರಿಯನ್ಸ ವಿತ್ ಎಕ್ಸಪಿರಿಮೆಂಟ್
ಥೆರಿ ನಿನ್ನದಾಗಿತ್ತು
ಈ ಪ್ರಯೋಗದಲ್ಲಿ;
ನನ್ನ ನೆರಳು ನಿನ್ನ ನೆರಳು ಜೊತೆಗೂಡಿ
ಪರಸ್ಪರ ಹಿಂಬಾಲಿಸುತ್ತ ಒಂದೇ ಆಗಿದ್ದವು
ಆಗಾಗ ಹಿಂದೆ ತಿರುಗಿ
ನಾನು ನೋಡಿದಾಗ
ನಿನ್ನ ನೆರಳು ಮತ್ತೊಂದು ನೆರಳನ್ನು
ಅರಸುತ್ತಿತ್ತು
ನಿಜವೇನೆಂದು ಮನವರಿಕೆಯಾದಾಗ
ನನ್ನ ನೆರಳು ನಿನ್ನಿಂದ ಬೇರ್ಬಟ್ಟಿತ್ತು
ಕನವರಿಕೆ ಕೈಬಿಟ್ಟಿತ್ತು:
ಪ್ರೇಮಕ್ಕಾವ ಬಂಧವಿಲ್ಲೆಂದು
ಅದಕ್ಕೆಲ್ಲಿಯ ನೆರಳ ಸಂಬಂಧವೆಂದು
ಬಯಲಿನಲ್ಲಿ ವಿರಾಜಿಸುವ ಪ್ರಕಾಶವೆಂದು
ನೀನೊಂದು ಸುಂದರ ನುಡಿಯ ವಾಚಿಸಿ
ನನಗೆ ಹೇಳಿದೆ
ನಾನೂ ಝಳಪಿಸುವ ಅಲುಗುಗತ್ತಿಯ
ದಾರಿಯಲ್ಲಿ ನಡೆದೆ
ಅಲ್ಲೊಂದು ಸತ್ಯದ ಬೆಂಕಿ ಬೆಳಕಿತ್ತು
ನಿನ್ನ ಪ್ರಯೋಗ ಫಲಿಸುವುದರ ಜೊತೆಗೆ
ನೀನೇ ಮತ್ತೊಂದರ ಪ್ರಯೋಗಕ್ಕೆ
ದ್ರವ್ಯವಾಗಿದ್ದನ್ನು
ನೆರಳುಗಳ ಹಿಂಬಾಲಿಸುತ
ನೀನೇ
ಬೃಹತ್ತಾದ
ಕಾಳ ನೆರಳಾದುದನ್ನು
ನಾನು ಕಂಡೆ.
ಈ ಸಮಯದಲ್ಲಿ..,
ಬೇಟೆಗಾರ ಬೇಟೆಯಾದ
ಅಜ್ಜಮ್ಮ ಹೇಳಿದ
ಕಥೆ ನೆನಪಿಗೆ ಬಂತು..!
ಇದು ನಿನ್ನ
ಪ್ರಯೋಗ ಪ್ರಹಾರವಾದ
ಹೊಸ ಕಥೆಬಿಡು..!!
ಪ್ರಯೋಗಗಳ ದಾಳಿಗೆ ಸಿಲುಕಿ ಮತ್ತೂ ನಲುಗುವ ಇರಾದೆ ಇರದಾದಾಗ ಕನವರಿಕೆಗಳ ಛಾನ್ಸೇ ಇಲ್ಲ
ನಿಜ..ಮೇಡಮ್
ಇರಾದೆ ಇಮಾನದಾರಿಯಲ್ಲಿ ಸಾಗಬೇಕು
ಧನ್ಯವಾದಗಳು.