ಅನುರಾಧಾ ಶಿವಪ್ರಕಾಶ್- ಗೆಣೆಕಾರ

ಕಾವ್ಯ ಸಂಗಾತಿ

ಗೆಣೆಕಾರ

ಅನುರಾಧಾ ಶಿವಪ್ರಕಾಶ್

ದೂರದ ಊರಿಂದ ಬರಬೇಕು ಗೆಣೆಕಾರ
ದೀಪಗಳ ಉರಿಸಲು ಇರಬೇಕು/ ನನ್ನೊಡನೆ
ಮೊಗದಿ ನಗೆಹೂವ ಘಮ ಬೇಕು/೧/

ಎಷ್ಟೊಂದು ದಿನವಾಯ್ತು ನಿನ್ನನ್ನು ಕಾಯುತ್ತಾ
ಕೊರಳುದ್ದ ಮಾಡಿ‌ ನೋಡುತ್ತಾ / ನಿನ್ನನ್ನು
ಕಣ್ಣೆರಡು ಸೋತಿತ್ತು‌  ಅರಸುತ್ತಾ/೨/

ದೀಪಗಳ ಸಾಲು ಬೆಳಗುವುದೇ ನೀನಿರದೆ
ನಿನ್ನೊಲವ ಎಣ್ಣೆ ಸೇರಿರದೆ / ನನ್ನೆದೆಯ
ಹೂ ಬತ್ತಿ‌‌‌ ಅರಳುವುದೇ/೩/

ಹಬ್ಬದ ಸಡಗರದಿ‌ ಮಾತಿಲ್ಲ ಕತೆಯಿಲ್ಲ
ಕಣ್ಣಿನ ಮಾತೇ ಸಾಕಲ್ಲ / ನಿನ‌ ಜೊತೆಗೆ
ಮನೆತುಂಬ ಮಂದಿ‌ ಇಹರಲ್ಲ.

ಒಡವೇ ವಸ್ತ್ರವು ಬೇಡ ಮೆಲ್ಲಲು ಸಿಹಿ ಬೇಡ
ನೀನಿರೆ ಸಗ್ಗ ಬೇರೇನು ಬೇಡ/ ಮಲ್ಲೆಯ
ಮಾಲೆಯ ತೊಡಿಸದೇ ಇರಬೇಡ /೪/


Leave a Reply

Back To Top