ಡಾ. ಪುಷ್ಪಾ ಶಲವಡಿಮಠರವರ ಹೊಸ ಕವಿತೆ-ಗಂಧವಾಗಿರು ಗೆಳತಿ ಅನವರತ

ಕಾವ್ಯ ಸಂಗಾತಿ

ಗಂಧವಾಗಿರು ಗೆಳತಿ ಅನವರತ

ಡಾ. ಪುಷ್ಪಾ ಶಲವಡಿಮಠ

ಕಣ್ಣ ತುಂಬ ನಿನ್ನ ಬಿಂಬ
ಮನದ ತುಂಬ ನಿನ್ನ ನೆನಹು
ಕಿವಿಯ ತುಂಬ ನಿನ್ನ ಗೆಜ್ಜೆ ಶಬ್ದ
ಇನಿತು ಪ್ರಾಣ ನೀನೇ ತುಂಬಿ
ಗಂಧವಾಗಿರುವೆ ಗೆಳತಿ!

ನನ್ನ ಬೊಗಸೆಯಲಿ ನಿನ್ನ ಮೊಗವಿದೆ
ನಿನ್ನ ಕೆನ್ನೆಯಲಿ ಚೆಂಗುಲಾಬಿ ಹೊಳಪಿದೆ
ಅಲ್ಲಿ ಕಮಲದಳದಂತ ನನ್ನ ಚುಂಬನವಿದೆ
ನನ್ನ ಮನಕಮಲದಲ್ಲಿ
ಗಂಧವಾಗಿರು ಗೆಳತಿ ಅನವರತ

ಚಲುವೇ ನೀ
ಎನ್ನ ಬಿಗಿದ ತೋಳಲ್ಲಿ
ಪರಿಮಳಿಸುತ್ತಾ ಅರಳುತಿರುವೆ
ನಿನ್ನ ಒನಪಿಗೆ ಮೈ ಮರೆತಿರುವೆ
ನನ್ನ ಹೂವಿನೆದೆಯಲಿ
ಗಂಧವಾಗಿರು ಗೆಳತಿ ಅನವರತ

ತನು ಪುಷ್ಪ
ಮನ ಮಕರಂದ
ಭಾವ ಪರಿಮಳದಲ್ಲಿ
ಗಂಧವಾಗಿರು ಗೆಳತಿ ಅನವರತ

ಹಾಲಿನಂತ ನಿನ್ನ ಪ್ರೀತಿಗೆ
ಜೇನಿನಂತ ನಿನ್ನ ನಗುವಿಗೆ
ಮಲ್ಲಿಗೆ ಮೊಗ್ಗು ಬಿರಿದಂತೆ
ನೀನುಲಿದ ಸಹಜ ಸುಂದರ ಮಾತುಗಳಿಗೆ
ನಾ ಸೋತು ಹೋದೆ ಮತ್ತೇ ಮತ್ತೇ
ನಿನ್ನ ಪ್ರೀತಿಯ ಬೆಂಕಿಗೆ ನಾ ಕರಿಗಿ ಹೋದೆ ಬೆಣ್ಣೆಯಂತೆ
ನೊರೆ ಹಾಲೋಳಗಿರುವ ತುಪ್ಪದ ಕಂಪಿನಂತೆ
ಗಂಧವಾಗಿರು ಗೆಳತಿ ಅನವರತ

ನನ್ನ ಹೂವಿನೆದೆಯಲಿ
ಪರಿಮಳವಾಗಿರು ಗೆಳತಿ
ನೀ ಪುಷ್ಪವಾದರೆ ನಾ ಮಕರಂದವಾಗಿ
ಸೇರುವೆ ನಿನ್ನ ಒಡಲನ್ನೆ
ನಿನ್ನ ಪ್ರೀತಿಯ ಕಡಲನ್ನೇ
ನನ್ನ ಹೂವಿನೆದೆಯಲ್ಲಿ
ಗಂಧವಾಗಿರು ಗೆಳತಿ ಅನವರತ


4 thoughts on “ಡಾ. ಪುಷ್ಪಾ ಶಲವಡಿಮಠರವರ ಹೊಸ ಕವಿತೆ-ಗಂಧವಾಗಿರು ಗೆಳತಿ ಅನವರತ

Leave a Reply

Back To Top