ಕಾವ್ಯ ಸಂಗಾತಿ
ದಯವಿಟ್ಟು ಮತ್ತೊಮ್ಮೆ ಹುಟ್ಟಿ ಬರಬೇಡಿ
ಎಲ್. ಎಸ್. ಶಾಸ್ತ್ರಿ
ಗಾಂಧಿ, ಬುದ್ಧ, ಬಸವ,
ಅಂಬೇಡಕರಾದಿಗಳೇ
ನೀವು ಸತ್ತಾಗೆಲ್ಲ
ನಮ್ಮ ಕವಿಗಳು
ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು
ಕವನ ಬರೆದು ಹಾಡಿದ್ದಾರೆ,
ಉದ್ದುದ್ದ ಲೇಖನ
ಬರೆದು ಪುಟ ತುಂಬಿದ್ದಾರೆ;
ನೀವೆಲ್ಲ ಇಂದಿಗೂ ಪ್ರಸ್ತುತ
ಎಂದು ರಾಜಕೀಯ ನಾಯಕರು
ಭೀಕರ ಭಾಷಣದಲ್ಲಿ
ಬೊಗಳೆ ಹೊಡೆದಿದ್ದಾರೆ..
ಅಯ್ಯಾ ಮಹಾತ್ಮರುಗಳಿರಾ,
ಅವರ ಮಾತೆಲ್ಲ ನಂಬಿ
ಮತ್ತೊಮ್ಮೆ ಹುಟ್ಟಿ ಬರಬೇಡಿ
ಅವೆಲ್ಲ ಸುಮ್ಮನೇ
ಆತ್ಮವಂಚನೆಯ ಮಾತುಗಳು
ಯಾರಿಗೂ ನೀವು ನಿಜವಾಗಿ
ಬರುವುದು ಬೇಕಾಗಿಲ್ಲ,
ನೀವು ಬರುವದಿಲ್ಲ
ಎನ್ನುವದೂ ಅವರಿಗೆ ಗೊತ್ತು
ನೀವು ಬಂದರೆ
ಅವರಿಗೇ ತೊಂದರೆ,
ಬಂದರೂ ನಿಮ್ಮನೇ
ಭ್ರಷ್ಟಗೊಳಿಸಿಯಾರು
ತಮ್ಮ ಜಾಲಕ್ಕೆ ಕೆಡಹಿ,
ಚುನಾವಣೆಯಲ್ಲಿ ಸ್ಪರ್ಧಿಸಲು
ನಿಮಗೆ ಈ ಯಾವ ಪಕ್ಷದ
ಟಿಕೇಟೂ ಸಿಗುವದಿಲ್ಲ,
ಏಕೆಂದರೆ ನಿಮ್ಮ ಬಳಿ
ಅವರಿಗೆ ಕೊಡಬೇಕಾದ
ಕೋಟಿಗಟ್ಟಲೆ ಹಣವಿಲ್ಲ,
ಅದು ಅವರಿಗೂ ಗೊತ್ತು,
ನಿಮ್ಮ ನೀತ್ಯುಪದೇಶಗಳಿಗಿಂದು
ಕವಡೆಕಾಸಿನ ಬೆಲೆಯೂ ಇಲ್ಲ
ಅವರಿಗದು ಬೇಕಾಗಿಯೂಇಲ್ಲ
ನಿಮ್ಮ ನಿಮ್ಮ ಜಾತಿಮತಗಳ
ತರಬಲ್ಲಿರಾ ನೀವು
ಅದೂ ಇಲ್ಲ
ಅಂದಾಗ ನೀವೇತಕ್ಕೆ
ಬೇಕು ಅವರಿಗೆ?
ನಿಮ್ಮ ಹೆಸರಿನ ಮೇಲೆಯೇ
ಬದುಕಲು ಕಲಿತಿದ್ದಾರೆ
ಹೇಗಿದ್ದರೂ ನಿಮ್ಮ ಫೋಟೋಗಳಿವೆ
ನಿಮ್ಮ ಶಿಲಾವಿಗ್ರಹಗಳಿವೆ
ಅಷ್ಟು ಸಾಕು
ನೀವೇ ಬೇಕೆಂದೆನಿಲ್ಲ…
ಮರೆತುಬಿಡಿ
ಮತ್ತೆ ಹುಟ್ಟಿಬರುವ ಮಾತು.