ಅರ್ಚನಾ ಯಳಬೇರು ಒಲವಿನ ನಿಟ್ಟುಸಿರು

ಕಾವ್ಯ ಸಂಗಾತಿ

ಒಲವಿನ ನಿಟ್ಟುಸಿರು

ಅರ್ಚನಾ ಯಳಬೇರು

ರೆಕ್ಕೆ ಬಲಿತ ಒಲವು
ಸ್ವಚ್ಚಂದವಾಗಿ ಹಾರುತಿದೆ
ಹರಿತ ಅಲುಗಿಗೆ ನಲುಗಿ
ನರಳುವ ಹಂಗಿರದೆ

ಉಸಿರು ಗಟ್ಟಿದ ನಲಿವು
ಬೆಚ್ಚನೆಯ ಚಾದರ ಹೊದ್ದು
ಮಲಗುವ ಹಂಬಲಕೆ
ಪ್ರೇಮಾಲಾಪದ ಜೋಗುಳವೇ ಮದ್ದು

ನೆತ್ತರು ಬಸಿದ ಕಂಗಳು
ನೋವುಗಳ ಸಾಂಗತ್ಯಕೆ ಸೋತು
ಹೆಬ್ಬಂಡೆಗಳ ನಡುನಡುವಲಿ
ಸಿಲುಕಿ ಬಿದ್ದಿದೆ ಜೋತು

ಭವಿತವ್ಯದಿ ಪ್ರೀತಿ ಬಸಿರ
ಹೊರುವ ಹೊಂಗನಸಲಿ
ಎದೆಯೊಳಗೆ ಗೂಡು ಕಟ್ಟಿ
ಕನವರಿಸುತಿದೆ ನಲ್ಮೆಯಲಿ

ಒಲವು ಚೆಲುವಿನ ಮಿಲನದಿ
ಪ್ರೇಮ ಕೂಸಿನ ಜನನ
ಮಧುರ ಮಮತೆಯ ಗುಟುಕಿಗೆ
ಕೆಣಕುವ ಮೈತ್ರಿಯ ತನನ

ಬದುಕ ನಿತ್ಯೋತ್ಸವಕೆ
ಹೆಜ್ಜೆ ಹಾಕಿದೆ ಮೌನ
ಹಚ್ಚೆ ಹಾಕುವ ತುಡಿತಕೆ
ಸಾಂಗತ್ಯ ನೀಡಿದೆ ಮಧುವನ


Leave a Reply

Back To Top