ಕಾವ್ಯ ಸಂಗಾತಿ
ಜುಗಲ್ ಬಂಧಿ ಗಜಲ್
ನಯನ. ಜಿ. ಎಸ್.
ವಿಜಯಪ್ರಕಾಶ್ ಸುಳ್ಯ
ನಯನ. ಜಿ. ಎಸ್
ಋತುಗಳ ಪಲ್ಲಟಗಳಿಗೆ ಅಣಿಯಾಗುತಿದೆ ಬದುಕು
ಬಿರಿದು ಬೀಗಿ ಬಾಗುತ ನಿಶೆಗಾಣುತಿದೆ ಬದುಕು
ಜಂಜಡಗಳ ಗುಣಕಗಳಲಿ ಕ್ಷಯವಾಗುತಿದೆ ಕ್ಷಣ
ನಷ್ಟ ಕೂಪಕೆ ಬಿದ್ದು ಜಂಜರವಾಗುತಿದೆ ಬದುಕು
ವಾಲುತಿದೆ ಮನಸು ಸಂಕಥೆಗಳ ಸಂಕರ್ಷಣದತ್ತ
ಬಣ್ಣದ ಬದುಕಿಗೆ ನೆಚ್ಚಿ ಬಂಜೆಯಾಗುತಿದೆ ಬದುಕು
ಕರಗಿ ಹೋಗುತಿದೆ ಅಸು ಕಾಂಚನದ ಲಾಲಸೆಯಲಿ
ಉದಂತವಾಗಿರಲು ಗರ್ವ ತೃಣವಾಗುತಿದೆ ಬದುಕು
ಗಮ್ಯದ ಕಾಂತಿ ಕುಂದಿರಲು ಕಂದಿವೆ ನಯನಗಳು
ಸತ್ಯಾಸತ್ಯತೆಗಳ ಜಾಡೆಗೆ ನಿಶ್ಚೇತನವಾಗುತಿದೆ ಬದುಕು.
***
ವಿಜಯಪ್ರಕಾಶ್ ಸುಳ್ಯ
ಅಹಮಹಮಿಕೆಗೆ ತಮಂಗವಾಗುತಿದೆ ಬದುಕು
ಮೆರೆದಾಡಿ ಮಣ್ಣಲ್ಲಿ ಮರೆಯಾಗುತಿದೆ ಬದುಕು
ಜಂಜಾಟದಲ್ಲಿ ಮುಗಿಯುತ್ತಿದೆ ಜೀವನದ ಗಡು
ಕಿಂಕೃತಿಯಲ್ಲಿ ಕೃಶವಾಗುತ ಸಾಗುತಿದೆ ಬದುಕು
ದ್ವಿಷತೆಯ ಪಡಿಕೆಯು ಹೊರಸೂಸುತ್ತಿದೆ ಗದಡು
ಕೆಡುಕು ಬಯಸುತಲಿ ಕೊನೆಯಾಗುತಿದೆ ಬದುಕು
ಹಸಿದವನ ಬಟ್ಟಲೊಳಗೆ ಮೆದ್ದವನ ಹದ್ದಿನ ಕಣ್ಣು
ಹರಕೆ ಹುಸಿಯಾಗಿರಲು ನರಕವಾಗುತಿದೆ ಬದುಕು
ಗುರಿಯಿಲ್ಲದೆ ನಡೆದಾಡಿ ಕ್ಷೀಣಿಸಿರುವನು ವಿಜಯ
ಅಂಡಲೆದು ಅಂದಗೆಟ್ಟು ಜರಡಾಗುತಿದೆ ಬದುಕು
*******