ಅಭಿಜ್ಞಾ ಪಿ.ಎಮ್ ಗೌಡ- ಬದುಕೆಂಬ ಕಾದಂಬರಿ…

ಕಾವ್ಯ ಸಂಗಾತಿ

ಬದುಕೆಂಬ ಕಾದಂಬರಿ

ಅಭಿಜ್ಞಾ ಪಿ.ಎಮ್ ಗೌಡ

ಬದುಕೆ ನೀನೆಷ್ಟು ವಿಸ್ಮಯ..!
ಅರಿತರೆ ನಿನ್ನಾಂತರ್ಯ ಅಮೋಘ
ಉಪೇಕ್ಷಿಸಿದರೆ ಅಂತ್ಯದ ಓಘ…

ಹುಟ್ಟು ಸಾವಿನ ನಡುವೆ
ಅದ್ಭುತ ಕೌಸ್ತುಭದಂತೆ
ಕೌಲೆತ್ತಿನ ರೂಪ
ಕ್ರಮಬದ್ಧತೆಯ ದೀಪ
ಅನುಕ್ರಮವಾಗಿಯೆ ಪ್ರಜ್ವಲಿಸೊ
ಕ್ಲಾಂತಿ ಕಾಂತಿಗಳ ಓರಣ
ಉಬ್ಬುತಗ್ಗುಗಳ ಹೂರಣ….

ಉದ್ಬೋಧದ ವೈಭವ
ಉದ್ದಿಷ್ಟ ಸ್ವಾದಿಷ್ಟಗಳ ಉತ್ಸವ
ಇದೊಂದು
ಅನೂಹ್ಯ ಕಾದಂಬರಿಯಂತೆ
ನಿತ್ಯಸತ್ಯ ಹೊಳಪು
ಗಹನ ವಿಷಯಗಳ ತಳುಕು
ಮೆಟ್ಟಿಲೇರಿದಂತೆ ತನ್ಮಯ
ಕಷ್ಟಗಳಿಗೆದರಿದರೆ
ಬರೀ ಅಯೋಮಯ…

ಸಾನಂದದ ಬಂಡೆ ಆಕ್ಷಿಪ್ತದ ಉಂಡೆ
ಉಪಮೆ ಉಪಮೇಯಗಳ ರಾಶಿ
ಅನುಭವಿಸಿದರೆ ಸ್ವರ್ಗ
ತೋರುವುದು ನೆಮ್ಮದಿಗೆ
ಸುಂದರ ಮಾರ್ಗ
ನಿತ್ಯ ಉನ್ಮೀಳಿತಗೊಳ್ಳೊ
ಶಾಡ್ವಲದಂತೆ ಹಚ್ಚ ಹಸಿರು
ವರ್ಷವಿಲ್ಲದಿರೆ ಬೆಂಗಾಡು
ಹರ್ಷವಿದ್ದರೆ ಅದ್ವಿತೀಯ ಹಾಡು….

ರಹಸ್ಯಗಳ ಹೊತ್ತು ಸಾಗೊ
ಯಾನದೊಳಗೆ
ಸೋಲು ಗೆಲುವುಗಳ ಪಾತ್ರ
ಅನನ್ಯ ಅಮೂಲ್ಯ..
ಬಂದದ್ದು ಬಂದ ಹಾಗೆ ಸಾಗಿದರೆ
ಬಾಳೊಂದು ಬಂಗಾರ
ಹೆದರಿ ಹಿಂಜರಿದರೆ
ಸ್ವಾರಸ್ಯವಿಲ್ಲದ ಶೃಂಗಾರ…

ಕಾದಂಬರಿಯ ಉಪೋದ್ಘಾತದಂತೆ
ಬಾಳಬಂಡಿಯ ಚಾಲನೆ
ಮುನ್ನುಡಿ ಬೆನ್ನುಡಿಗಳ ರಿಂಗಣ
ನೋವು ನಲಿವುಗಳಿಗೆ ತಂಗುದಾಣ
ಆಂತರ್ಯದ ಗುಟ್ಟು
ಅರ್ಥೈಸಿಕೊಂಡರೆ ಬಾಳು ಚಂದ
ಸಾಗರದಷ್ಟು ಆಳ
ಮುಗಿಲಷ್ಟು ಉದ್ದಗಲವಿದ್ದರು
ಅನುಭವ ಅನುಭಾವಗಳಲಿ
ಅನುರಣಿತದ ಅನುರಾಗ
ಅನುರೋಧದ ಅನುವೇಷ್ಟಿಸು
ತಿರುವು ಬಾಳಿಗೊಂದು ಅಂದ…!

ಗಿರಿಶಿಖರಗಳಂತೆ ಆಹ್ಲಾದ
ಆಶ್ಚರ್ಯ ಅದ್ದೂರಿ
ಒಮ್ಮೊಮ್ಮೆ ಮುನಿದು ಕೆರಳಿದರೆ
ಜ್ವಾಲಾಮುಖಿಯಂತೆ
ಉರುಳಿಸೊ ಉರಿಯುಂಡೆಯ
ಭೀಕರ ಭೀಭತ್ಸತೆಗೆ ದಾರಿ..!
ಒಪ್ಪಿ ಅಪ್ಪಿ ನಡೆದು
ಕಷ್ಟ ಸುಖಗಳ ಮೆಟ್ಟಿ
ಒಳಿತು ಕೆಡಕುಗಳ ವೀಕ್ಷಣೆಯಲಿ
ಮಾಡೋ ಅತಿ ದೊಡ್ಡ ಸವಾರಿ..!


2 thoughts on “ಅಭಿಜ್ಞಾ ಪಿ.ಎಮ್ ಗೌಡ- ಬದುಕೆಂಬ ಕಾದಂಬರಿ…

Leave a Reply

Back To Top