ಅರ್ಚನಾ ಯಳಬೇರುರವರ ಗಜಲ್

ಕಾವ್ಯಸಂಗಾತಿ

ಗಜಲ್

ಅರ್ಚನಾ ಯಳಬೇರು

ನೆಟ್ಟಿರುಳಲಿ ನಯನಗಳ ಅರಳಿಸಿ ಹೊಂಗನಸುಗಳ ಕಟ್ಟಿದವ ನೀನು ಮಾತ್ರ
ಬತ್ತಿದೆದೆಯಲಿ ಓಘಿಸುವ ಭಾವಗಳ ಧೀರ್ಘಿಕೆಯನು ಹರಿಸಿದವ ನೀನು ಮಾತ್ರ

ಹೊಂಬಿಸಿಲ ತಂಬೆಲರಾಗಿ ಬಂದೆ ಒಡಲ ಬೇಗೆಯಲಿ ಬೆಂದ ಮನಕೆ
ಕಡು ವಿಷಾದದ ಬಟ್ಟಲೊಳಗೆ ಜಿನುಗುವ ವ್ಯಥೆಗಳ ಹೀರಿದವ ನೀನು ಮಾತ್ರ

ತೋಯಜಗಳ ಉತ್ಪಲಿನಿಯಾಗಿ ಕಸುವು ಕಟ್ಟಿ ಕೊಟ್ಟಿರುವೆ ನನ್ನೆದೆಯ ಔಡಲಕೆ
ಅಕ್ಷೀಣವಾದ ನನ್ನ ಜೀವ ಸೆಲೆಯಲಿ ಪ್ರೇಮ ಪೀಯೂಷ ಉಣಿಸಿದವ ನೀನು ಮಾತ್ರ

ನಿತ್ಯ ನಲಿವಿನ ಗಡಣವನ್ನೇ ಹೊತ್ತು ತಂದಿರುವೆ ಅನಾಥ ಅಸುವಿಗೆ ನಾಥನಾಗಿ
ಹಪಹಪಿಸುವ ಪ್ರೀತಿ ಕ್ಷುಧೆಯಲಿ ಒಲವ ರಸದೌತಣ ಬಡಿಸಿದವ ನೀನು ಮಾತ್ರ

ತಹತಹಿಸುವ ಅಭೀಪ್ಸೆಗಳ ನಡುವೆ ನಿರವಿಸುವ ಆಲಾಪಕೆ ಮೌನಿ ಅರ್ಚನಾ
ಬದುಕ ಬಿಸುಪಿನಲಿ ಅನೂಹ್ಯ ಆರುಮೆಯ ಉತ್ತು ಬಿತ್ತಿದವ ನೀನು ಮಾತ್ರ

Leave a Reply

Back To Top