ಕಾವ್ಯ ಸಂಗಾತಿ
ಮುಂಬೆಳಕಾಗಲಿ
ಡಾ. ಪುಷ್ಪಾವತಿ ಶಲವಡಿಮಠ


ಮುಖ ಕಮಲದಲ್ಲಿ
ನಗೆಯ ಬೆಳಕು ಹೊಮ್ಮಲಿ
ಬಿರಿದ ತುಟಿಯಿಂದ
ಮಧುರ ಗಾನ ತುಳುಕಲಿ
ಮೋಹನ ಮುರುಳಿಯ ಗಾನ
ದೂರ ಬಹುದೂರದ ಜೀವಕೆ ಚೇತನವಾಗಲಿ
ನೆನಪಿನ ಗರಿ ಬಿಚ್ಚಿ
ನವಿಲು ನರ್ತಿಸಲಿ
ಹೊಂಗೆ ಮರದ ತಂಪಿನಂತೆ
ಪ್ರೀತಿ ತ (ಕ )0ಫು ಹರಡಲಿ
ಬಾಳೆಯ ಸುಳಿಯಂತೆ
ಸುಳಿಯೊಡೆದು ರಸಕಾವ್ಯ ಸುಳಿಯಲಿ
ಸುರಲೋಕದ ಸುರಕನ್ಯೆಯ ನಾಚಿಕೆಯಿಂದ
ಕೆಂಪಾದ ರಾಗರತಿಯ ಕೆಂಪು
ಮಧುರ ಅಧರಕೆ ರಂಗಾಗಲಿ
ಜಡತೆಯ ನೂಕಿ ರಸಭಾವ ಹೊಮ್ಮಲಿ
ಜೀವ ಜೀವದಲಿ ಸಮರಸಗಾನ ಹರಿದು ಬರಲಿ

ಕಾಲ ದೂರ ಸರಿದು ನಿಲ್ಲಲಿ
ಬಿಸಿ ಉಸಿರು ಕಣ್ಣ ಕಂಬನಿ
ಪಾತಾಳದಾಳದಲ್ಲಿ ಹೂತು ಹೋಗಲಿ
ಟೊoಗೆ ಟೊoಗೆಗೆ ಕುಳಿತ ಗಿಳಿ
ಹಸಿರು ಪುಕ್ಕ ಕೆದರಿ
ಕೆಂದುಟಿಯಿಂದ ಹೊಸಗೀತೆ ಹಾಡಲಿ
ಶುಭಗೀತೆ ಹಾಡಲಿ
ಬಂಗಾರದ ಬದುಕಿಗೆ ಮುಂಬೆಳಕಾಗಲಿ.