ಆಶಾ ಹೆಗಡೆಯವರ ಕವಿತೆ-ಆಶಾವಾದ

ಕಾವ್ಯ ಸಂಗಾತಿ

ಆಶಾವಾದ

ಆಶಾ ಹೆಗಡೆ

ಶರವೇಗದ ಕಾಲಯಾನದಲೂ
ಕೌತುಕದ ನೋಟಕೆ ಸಾಕ್ಷಿಯಾಗಿದೆ
ಪ್ರಕೃತಿಯ ಚರಾಚರಗಳು,
ಹಠದ ಮನೋಭೂಮಿಕೆಗೆ ಪರದೆ ಎಳೆದು
ಜೀವವಿದ್ದೂ ಜೀವಾಳವಿಲ್ಲದ ಮಾನವನಿಗೆ
ಕಲಿಸುತಿರುವ ಪರೋಕ್ಷ ಪಾಠಗಳು..

ಹಳೇ ಸೂರಿನಡಿ ಬಡತನದ ಬೇಗೆಯಲಿ ನಿಂತು
ಮೇಲೇರುವ ಹಪಹಪಿಯೇ ಇಲ್ಲದ
ನಿಸ್ತೇಜ ಕಂಗಳಿಗೆ ಚೈತನ್ಯವೇ ಉಡುಗಿ ಹೋಗಿರೆ,
ಇಂಚಿಂಚು ಆಶಾವಾದವ ತುಂಬಿದೆ
ಕೆಸರಲೇ ಅರಳಿ ನಿಲ್ಲುತ ತಾವರೆ..

ಅದ್ಯಾವುದೋ ಅವಮಾನದಿ ನೊಂದು
ತಳಸೇರಿ ಮುಖಮುಚ್ಚಿ
ಅಡಗಿ ಹೊರಬರದ ಕಾಯವೇ,
ಮನೆಯೊಡತಿ ಮತ್ತೆ ಮತ್ತೆ ಕಿತ್ತೊಗೆದರೂ ಅವಮಾನವಿಲ್ಲದೇ ಮರುಕ್ಷಣದಿ
ಜೇಡ ಹೆಣೆದ ಬಲೆ ಕುಸುರಿಯು
ಕವಿಯ ಕವನದ ಆಶಯಕೆ ಜೀವ ನೀಡುವುದಿಲ್ಲವೇ?

ಹೊಸ ಆವಿಷ್ಕಾರಕೆ ನಕಾರವೆಂಬ
ಪೆಟ್ಟಿನ ಮೇಲೆ ಪೆಟ್ಟು ಬೀಳಲು
ಸೃಜನಶೀಲತೆಯ ಕದವ ಮುಚ್ಚಿಬಿಡುವುದೇ
ಪೂರ್ತಿಯಾಗಿ,
ಶಿಲೆಯೊಂದು ಪೆಟ್ಟಿನ ಮೇಲೆ ಪೆಟ್ಟು ತಿಂದು
ಅರಗಿಸಿಕೊಂಡ ಮೇಲೆೇ ಶಿಲ್ಪವಾಗಿದೆ ಸ್ಫೂರ್ತಿಯಾಗಿ..

ತೃಣಕಾರಣಕೆ
ಕೈಯಾರೇ ಜೀವವ ಕೊನೆಗಾಣಿಸುವ
ಘೋರತೀರ್ಮಾನ ಯಾಕದುವೆ?
ಆ ಹಗಲು ಈ ಇರುಳ ಸೂರ್ಯ ಚಂದ್ರರಾಟದಿ
ಅಡಗಿಹುದು ಗುಟ್ಟೊಂದು ಅರಿ ಮನವೆ
ನಿರಾಶಾವಾದಿಗೆ ಬರೀ ಕಪ್ಪು-ಬಿಳುಪಿನ
ನಾಟಕವಂತೆ,
ಆಶಾವಾದಿಗೆ ಮುಗಿಯದ ದಿನದಿನದ
ಅರುಣೋದಯದ ಭರವಸೆಯದುವೆ..

ಎಲೆಗಳುದುರಿದಾಗ ಕನಸ ಚಿವುಟದೇ
ಹೊಸಚಿಗುರು ಹುಟ್ಟುವ
ನಾಳೆಗಳ ಭರವಸೆಯ ಹೊಸೆಯುತ
ನಿರಂತರ ನಿಸರ್ಗದ ಜೊತೆಜೊತೆಗೆ
ಮರುಕಳಿಸುತಿರಲಿ ಹುಮ್ಮಸ್ಸು,
ಕಾಲನ ಕರೆಗೆ ಓಗೊಡಲೇಬೇಕಾದ
ಕಟ್ಟಕಡೆಯ ಕ್ಷಣದವರೆಗೂ
ಸೋಲದಿರಲಿ ಮನಸ್ಸು.


Leave a Reply

Back To Top