ಕಾವ್ಯ ಸಂಗಾತಿ
ಭಾವವೀಣೆ
ಭಾರತಿ ಕೇದಾರಿ ನಲವಡೆ
ಮಾತು ಮೌನಗಳ ನಡುವೆ ನಿನ್ನ ಸವಿನೆನಪು
ಕಳೆದ ಅನು ಕ್ಷಣವು ಚಿತ್ತದಲಿ ಮೂಡಿ ಅಚ್ಚಾಗಿದೆ
ನಿನ್ನ ಹೂ ನಗೆಯ ಮುತ್ತಿನಹಾರ ಸೆಳೆದಿದೆ
ಓಲೈಸುತಿದೆ ಭಾವಲಹರಿಯ ತೆರದಿ ಇಂದು//
ಕಳೆದ ಸುಂದರ ಕ್ಷಣಗಳೀಗ ನನಸಾಗಬೇಕಿದೆ
ಕಾದಿಹೆನು ನಿನ್ನ ನೋಡಲು ಸೊಗಸಿಲ್ಲ ಬದುಕಿಗೆ
ಕಾರ್ಮುಗಿಲಿನಂತೆ ಮತ್ತೆ ಇಳೆಯ ಮಿಲನ
ಬಯಸಿದೆ ಮನವಿಂದು ನಿನ್ನಮುಂಗಾರಿನ ಪುಳಕವಾಗಿ//
ದ್ವಂದ್ವಗಳ ನಡುವೆ ಮತ್ತೆ ಅಮರವಾಗುವ ನಾವು
ಪ್ರೇಮಕಾವ್ಯದಿ ಉನ್ಮತ್ತರಾಗಿ ನಲಿಯುತ
ಬಾ ಸಖಿಯೇ! ಬೇಡ ಹುಸಿಮುನಿಸು ನಮಗೀಗ
ಸವಿಗನಸಲಿ ಒಲವ ಪಲ್ಲಕ್ಕಿಯಲಿ ಕುಳಿತು//
ಹೃದಯದರಮನೆಯ ಯುವರಾಣಿ ನೀನು ಬಾ ಒಲಿದು
ಕುಡಿನೋಟದಿ ಬಾಣ ಬೀಸಿ ಸೂಜಿಗಲ್ಲಂತೆ ಸೆಳೆದೆ
ಭಾವವೀಣೆಯ ತಂತಿ ಮೀಟಿ ಬಾಳ ನೌಕೆಗೆ
ಜೊತೆಯಾಗು ಮನದರಸಿಯೇ ಸಹಿಸೆನು ವಿರಹ ವೇದನೆ//
———————————————-