“ಭಾವ ಭೃಂಗ”-ಈಶ್ವರ ಜಿ ಸಂಪಗಾವಿ

ಪುಸ್ತಕ ಸಂಗಾತಿ

ಭಾವ ಭೃಂಗ”

ಈಶ್ವರ ಜಿ ಸಂಪಗಾವಿ

ಕವಿ ಈಶ್ವರ ಜಿ ಸಂಪಗಾವಿ ಅವರ “ಭಾವ ಭೃಂಗ” ಕವನ ಸಂಕಲನ ಕೈಸೇರಿದ ಹೊತ್ತು ಓದುವ ಕುತೂಹಲಕ್ಕೆ ಪುಟ ತಿರುವಿದಾಗಲೆ ಮಧುರ ಭಾವದ ಚಂದದ ಕವನಗಳ

ಹೂಮಳೆಗರೆದಂತೆ ಅನ್ನಿಸಿತು.ಕೃತಿಯ ಮೊದಲ ಕವನ ‘ಶಾಂತಿ ನೆಲೆಸು ದೇವಾ’ ಓದುತ್ತಿದ್ದಂತೆ ಅಣ್ಣ ಬಸವಣ್ಣನವರ ವಚನ ‘ಅತ್ತಲಿತ್ತ ನೋಡದಂತೆ ಅಂಧಕನ ಮಾಡಯ್ಯಾ ತಂದೆ’ ಎನ್ನುವ ಸಾಲುಗಳೆ ನೆನಪಾದವು.

ಪುಟ ಹೊರಳಿಸಿದಂತೆ ನವಭಾವದೋಕುಳೆಯೆ ಚಿಮ್ಮಿದಂತಹ ಕವನಗಳು ತೆರೆದುಕೊಂಡವು. ಬದುಕಿನ ಎಲ್ಲಾ ಮಜಲುಗಳಲ್ಲಿ ಕಂಡುಂಡ ಅನುಭವಗಳೆ ಇಲ್ಲಿ ಕವನದ ಸಾಲುಗಳಾಗಿರುವುದಂತು ಸತ್ಯ.

ಕಂಡ ಕನಸು,ಮಾಗಿದ ಮನಸು,

ಹತ್ತುಹಲವು ಭಾವಗಳ ನಿವೇದನೆ,

ಒಳಮನದ ತಾಕಲಾಟ,ಕೆಲವೆಡೆ

ಜೋರಾಗಿ ಕಿರುಚಿ ಹೇಳುವಂತಹ ಆಕ್ರಂದನ,ಕೆಲವು ಕವನಗಳಲ್ಲಿ ನೀರವ ಮೌನ, ಒಮ್ಮೆ ನಗು, ಒಮ್ಮೆ

ಅಳು ಒಮ್ಮೋಮ್ಮೆ ಹಸುಗಂತನಂತಹ ಮುಗ್ಧ ನಗುವಿನಂತಹ ಕವನಗಳು ಓದುಗರ ಮನ ಮುಟ್ಟುವುದಂತು ನಿಜ.

ವಯಸ್ಸು ಮಾಗಿದಂತೆ ಮನಸ್ಸು ಹದಗೊಂಡಾಗ ಸಮಭಾವದ ರಸಪಾಕದಂತಹ ಸಾಲುಗಳು ತಾವೆ ತಾವಾಗಿ ಸಹಜ ವೆಂಬಂತೆ ಬರೆಸಿಕೊಂಡುಬಿಡುತ್ತವೆ ಎನ್ನುವಷ್ಟು ಸಹಜತೆ ಬರಹ ಈ ಸಂಕಲನದಲ್ಲಿದೆ.

ಮುಖ್ಯವಾಗಿ ಮಧುರ ಒಲವಿನ ಮಿಡಿತದ ಕವನಗಳು ಓದುಗರ ಮನ ಅರಳಿಸುತ್ತವೆ.ಕನಸುಗಳನು ಕೆರಳಿಸುತ್ತವೆ.ಅಮ್ಮನ ನೆನವಿನಲ್ಲಿ ಮಗುವಾಗುವ ಕವಿ ಪ್ರೇಯಸಿ ಒಲವು ಬಯಸಿ ಬಾಯಾರು ವಂತೆ ತೊಳಲಿ ಬಳಲುವ ಸಾಲುಗಳು ಪ್ರೇಮ ಕವನಗಳಾಗಿವೆ ಎಂದರೆ ತಪ್ಪಿಲ್ಲಾ.ಸಮಾಜದ ನಡೆಯುವ ಅನ್ಯಾಯಗಳಿಗೆ ದನಿಯಾಗುವ ಕವನ

‘ರಕ್ತ ಬೀಜಾಸುರರ ಮಟ್ಟಹಾಕು’,

ಸಾಲುಮರದ ತಿಮ್ಮಕ್ಕ ನವರ ಸ್ಮರಣೆಯಲ್ಲಿ ಮೂಡಿಬಂದ ಕವನ ‘ವೃಕ್ಷ ದೇವತೆ ತಿಮ್ಮಕ್ಕ’ ಫಲಾಪೇಕ್ಷೆ ಪಡದೆ ಮಾಡು ನೀ ಕಾಯಕ ಎನ್ನುವ ಸಾತ್ವಿಕ ಸಂದೇಶ ಸಾರುವ ಕವನ ‘ಫಲಾಪೇಕ್ಷೆ ಬೇಕೆ’ ವಿಕಲಾಂಗರನು ಕಂಡು ಅಪಹಾಸ್ಯ ಮಾಡಿದಿರಿ ಎನ್ನುವ ಮಾನವೀಯ ಕಳಕಳಿಯಲ್ಲಿ ಮೂಡಿಬಂದ ಕವನ’ ಸಹಾಯ ಬೇಕಿದೆ’

ಹೀಗೆ ಹತ್ತು ಹಲವು ಭಾವಗಳನ್ನು

ಕವನದಲ್ಲಿ ಬಿತ್ತಿ ಕೃಷಿ ಗೈದ ಹಿರಿಯ ಕವಿಯ ಬಹುತೇಕ ಕವನಗಳು ಆದಿ ಹಾಗೂ ಅಂತ್ಯಪ್ರಾಸದಲ್ಲಿಯೆ ಇವೆ.

ಅರ್ಥಪೂರ್ಣ ಪದಗಳನ್ನು ಒಪ್ಪವಾಗಿ ಹೆಣೆದು ಕನ್ನಡಾಂಬೆಯ ಕೊರಳಿಗೆ ಕವನ ಸಂಕಲನದ ಹಾರಮಾಡಿ ತೊಡಿಸಿದಂತಹ ಕೃತಿ ಆಸಕ್ತ ಓದುಗರ ಕೈಸೇರಿ ಕವಿಮನದ ಭಾವಕೆ ಸ್ಪಂದಿಸಲಿ ಎಂಬುದೆ ಅಭಿಮಾನಿ ಓದುಗಳಾದ ನನ್ನ ಅನಿಸಿಕೆ.ಹಿರಿಯ ಕವಿಗಳಿಂದ ಇಂತಹ ಇನ್ನಷ್ಟು ಉತ್ತಮ ಕೃತಿಗಳು ಕನ್ನಡ ಸಾರಸ್ವತ ಲೋಕದ ತಾರೆಗಳಾಗಿ ಬೆಳಗಲಿ ಎನ್ನುವುದೆ ಸಾಮಾನ್ಯ ಓದುಗಳಾದ ನನ್ನಾಸೆ.


ಆಶಾ ಎಸ್ ಯಮಕನಮರಡಿ

Leave a Reply

Back To Top