ವಿಷ್ಣು ಆರ್. ನಾಯ್ಕಕವಿತೆ-ನೌಕರನ ಅಳಲು

ಕಾವ್ಯ ಸಂಗಾತಿ

ನೌಕರನ ಅಳಲು

ವಿಷ್ಣು ಆರ್. ನಾಯ್ಕ

ನೌಕರನ ಅಳಲು
ದಿನವೂ ಪಾಪಪ್ರಜ್ಞೆ…
ಕಳವಳ…ಹೇಳಲಾಗದ ಸಂಕಟ
ಪಪ್ಪಾ… ಬಾಯ್..ಯಾವಾಗ ಬರುತ್ತೀರ?
ಮಿಸ್ …ಯು..
ಬಾಗಿಲಂಚಲಿ ನಿಂತ ಮಗನ ಕಣ್ಣಲಿ
ನಿರೀಕ್ಷೆ…ಪ್ರತೀಕ್ಷೆ..
ಎಳೆ ಮಗನ ಮಾತುಗಳಿಗೆ
ಕಂಠ ಗದ್ಗದವಾಗಿ ಕಣ್ಣು ಹನಿಗೂಡುತ್ತದೆ
ಅವನ ಕಣ್ಣ ಕನವರಿಕೆ ಸಾಧು
ತನ್ನವರು, ತನ್ನ ಪ್ರೀತಿಸುವವರು
ತನ್ನ ಬಳಿಯೇ ಇರಬೇಕು..
ಅವರು ಹೊರ ಹೊರಟಾಗ
ದಿಗಿಲುಗಟ್ಟುವ ಮೌನ
ಕಾಡುವ ಏಕಾಂಗಿತನ
ವಸ್ತುಗಳಿಗಿಂತ ವ್ಯಕ್ತಿಗಳು ಬೇಕೆಂಬ
ಸಹಜತನ

*

ನಾವು ಸರ್ಕಾರಿ ಉದ್ಯೋಗದವರು
ಯಾವ್ಯಾವುದೋ ಊರುಗಳಲ್ಲಿ ಬದುಕು
ಕಟ್ಟಿಕೊಂಡವರು
ಸಮಾಜದಲ್ಲೊಂದು ಸ್ಥಾನ
ಹಣಕಾಸಿನ ಸ್ಥಿತಿವಂತ ಮಾನ
ಎಲ್ಲವೂ ಇದೆ…
ನಮ್ಮ ಸಂತೋಷಕ್ಕೆ, ಸಮಾಧಾನಕ್ಕೆ.
ಎಲ್ಲವೂ ಬೇಕು..ಬೇಕು…ಬೇಕು…
ಹಣ… ಮಾನ.. ಸನ್ಮಾನ ..
ಆದರೆ…
ಎಲ್ಲೋ ಒಂದೆಡೆ ಬದುಕು ಗುಲಾಮ..

ದಿನನಿತ್ಯ ನಮ್ಮದೇ ಕಾರ್ಯ ವೈಖರಿ..
ಮೊಬೈಲ್ ಕಿರಿಕಿರಿ..
ಪ್ರೀತಿ, ಮಮತೆಯ ಮಧ್ಯೆ
ಹಿಂಡಲ್ಪಡುವ ಹುಳಿ..
ಅದ್ಯಾವುದೋ ಕೆಲಸಕ್ಕೆ ಹೊತ್ತಲ್ಲದ ಹೊತ್ತಲ್ಲಿ ಬರುವ ಬುಲಾವ್…
ಮತ್ತೆ ಕೆಲಸಕ್ಕೆ ಸಲಾಮ್…
ಇವೆಲ್ಲದರ ಮಧ್ಯೆ ಸಂಬಂಧಗಳೇ ಬರೀ ಪಾಪರ್…

*

ಮದುವೆಯಾಯ್ತು ಹುಟ್ಟಿದ ಮಗು
ಮಗುವಿನ ಆರೈಕೆ…
ಪಾಲನೆ ‌..ಪೋಷಣೆ…
ಎಲ್ಲವನ್ನು ಮಗುವಿಗೆ
ಕೊಡಿಸಿದ್ದಾಯಿತು
ಹೊರಗಿನ ಜಗಕ್ಕೆ ತೋರುವ ಸಂಭ್ರಮ ದುಪ್ಪಟ್ಟಾಯಿತು
ಆದರೆ ‌..ಒಳಗಿದೆ ಪಾಪ ಪ್ರಜ್ಞೆ
ಬಟ್ಟೆ ಬರೆ, ಆಹಾರ, ತೊಟ್ಟಿಲು ಎಲ್ಲಾ 
ಕೊಡಿಸಿದರಾಯ್ತೆ..?
ಕೊಡಬೇಕಾದ
ವಾತ್ಸಲ್ಯ.. ಸಮಯ
ಕೊಡಬೇಕಾದ ಮಮತೆ
ಊಹುಂ ಕೊಡಲಾಗುತ್ತಿಲ್ಲ…
ನಮ್ಮದೇ ಕೆಲಸಗಳು‌.. ಕನಸುಗಳ 
ಮಧ್ಯೆ ಮಗು ಅನಾಥ..
ಎಲ್ಲಾ ಯೋಚಿಸಿದಾಗ
ಮಗುವಿನ ಕಣ್ಣೋಟ ನಮ್ಮನ್ನು ಚುಚ್ಚುತ್ತದೆ
ನಿರೀಕ್ಷೆಗಳ ಆಲಿಂಗನ ಮೈ ತಟ್ಟುತ್ತದೆ..


2 thoughts on “ವಿಷ್ಣು ಆರ್. ನಾಯ್ಕಕವಿತೆ-ನೌಕರನ ಅಳಲು

Leave a Reply

Back To Top