ಶಿಲ್ಪ ಸಂತೋಷ್ ಕವಿತೆ-ತಲೆದಿಂಬು, ಬಂಧನವಿಲ್ಲದ ಬಂಧು

ಕಾವ್ಯ ಸಂಗಾತಿ

ತಲೆದಿಂಬು, ಬಂಧನವಿಲ್ಲದ ಬಂಧು

ಶಿಲ್ಪ ಸಂತೋಷ್

ದಿನದ ರಗಳೆ ಮುಗಿದು
ಇರುಳು ತಾನಾಗಿ ಸುರಿದು
ಚಂಚಲೆಯಿವಳು ಬರಸೆಳೆದು
ಅಪ್ಪಿಕೊಂಡಾಗ ಬೆಚ್ಚನೆ ಭಾವತುಂಬಿದ ನೆಚ್ಚಿನ ತಲೆದಿಂಬೇ
ನೀನೆಷ್ಟು ಆಪ್ತವಂತ…

ಎಷ್ಟೊಂದು ನೋವುಗಳ
ಎದೆಯೊಳಗೆ ಬಚ್ಚಿಟ್ಟು
ದಿನವೆಲ್ಲಾ ನಗುತ್ತಿದ್ದು,
ಇರುಳಲ್ಲಿ ನಿನ್ನ ಮಡಿಲಲ್ಲಿ
ತಲೆಯಿಟ್ಟು ಅಳುವಾಗ
ಮೌನವಾಗಿ ಕೇಳಿಸಿಕೊಂಡು
‌ಕಣ್ಣೀರೊರೆಸಿ ನೋವಿನ ಗುಟ್ಟನ್ನೆಲ್ಲಾ ಗುಟ್ಟಾಗಿಯೇ ಉಳಿಸುವ
ನೆಚ್ಚಿನ ತಲೆದಿಂಬೇ
ನೀನೆಷ್ಟು ಆತ್ಮೀಯ…

ನಿದ್ದೆ ಬರದ ರಾತ್ರಿಗಳಲ್ಲಿ
ಅತ್ತಿಂದಿತ್ತ ಇತ್ತಿಂದತ್ತ ಹೊರಳಿ
ತಲೆ ಚಿಟ್ಟು ಹಿಡಿಸುವ
ಗೋಳು ಹೇಳುತ್ತಾ ಕಿರಿಕಿರಿ ಮಾಡಿದಾಗಲೂ ಮುನಿಯದೆ
ಸಂಯಮದಿಂದ ಕೇಳಿಸಿಕೊಂಡ
ನೆಚ್ಚಿನ ತಲೆದಿಂಬೇ ನೀನೆಷ್ಟು
ಕರುಣಾಮಯಿ…

ಇಡೀ ರಾತ್ರಿ ಮಡಿಲಲ್ಲಿ ಇಟ್ಟು ಸಂತೈಸುವ ಅಮ್ಮನಾಗುವ,
ಈ ತೋಳಿನಲ್ಲಿ ಒಮ್ಮೊಮ್ಮೆ
ಮುದ್ದಿನ ಮಗುವಾಗುವ,
ಏನೂ ಪ್ರಶ್ನೆ ಕೇಳದೆ ಸಂತೈಸುವ
ಸ್ನೇಹಿತನಾಗುವ…
ಯಾವ ಬಂಧನವೂ ಇಲ್ಲದ ಬಂಧುವೇ…
ಅದಕ್ಕೇ ಈ ಹೆಣ್ಮನಕ್ಕೆ ಬಹಳ
ಅಚ್ಚು ಮೆಚ್ಚು ‌ನೀನಾಗಿರುವೆ.


2 thoughts on “ಶಿಲ್ಪ ಸಂತೋಷ್ ಕವಿತೆ-ತಲೆದಿಂಬು, ಬಂಧನವಿಲ್ಲದ ಬಂಧು

  1. ಅದ್ಭುತ ನಿಮ್ಮ ಕವನಗಳು ಹೀಗೆ ಮುಂದುವರಿಯಲಿ.ತಾಯಿ ಭುವನೇಶ್ವರಿ ದೇವಿ ಆರ್ಶೀವಾದ ಯಾವಾಗಲೂ ನಿಮ್ಮ ಮೇಲೆ ಇರಲಿ.

Leave a Reply

Back To Top