ಅಜಿತ್ ಹರೀಶಿಯವರ ಹೊಸ ಕವಿತೆ-ಅಲೆಯ ಮೇಲಿನ ಚೆಂಡು

ಕಾವ್ಯ ಸಂಗಾತಿ

ಅಲೆಯ ಮೇಲಿನ ಚೆಂಡು

ಅಜಿತ್ ಹರೀಶಿ

ಚೆಂಡೊಂದು ಆಡುವ ರಭಸದಿ
ಕೈ ಜಾರಿ ಸೇರಿಹುದು ಶರಧಿ
ತೆರೆಗಳ ಮೇಲೆ ತೇಲುತ್ತಾ
ಸುರುಳಿಗಳ ನಡುವೆ ಸಿಲುಕುತ್ತಾ
ಮೇಲೇಳುವುದು ಪುಟಿದು
ಕಣ್ಣುಮುಚ್ಚಾಲೆಯಾಡುತ್ತಾ
ಹೋಗುತ್ತಿದೆ ಕಳೆದು

ಇಲ್ಲವಾಗಬಹುದಾದ ಬಾಲಿನತ್ತ ಚಿತ್ತ
ಬರಬಹುದು ಮತ್ತೆ ಇತ್ತ
ಬಿಸಿಲಿನ ಝಳಕ್ಕೆ
ಇಳಿಯಬಹುದು ಅದರೊಳಗಿನ ಗಾಳಿ
ಬಂಡೆಗಪ್ಪಳಿಸಿ ಹೋಗಬಹುದು ಸೀಳಿ
ಉಪ್ಪು ನೀರಿಗೆ ಲಡ್ಡಾಗುವುದು ದಾರ
ಅದೆಷ್ಟೇ ಇದ್ದರು ಕಾಸ್ಟ್ಲೀ

ಅಪ್ಪ ಕೊಟ್ಟ ಗಿಫ್ಟು
ಅದರ ನೀಲಿ ಬಣ್ಣ ಫೇವರಿಟ್ಟು
ಮನೆಯಿಂದ ತರಲೇಬಾರದಿತ್ತು
ಇಷ್ಟು ದಿನ ಕಾಪಿಟ್ಟು
ಸಿಕ್ಕಿತ್ತು ಸೂಚನೆ ಹೊರಡುವಾಗ
ಅದುರಿತ್ತು ಕಣ್ಣು
ಅಡ್ಡಬಂದಿತ್ತು ಬೆಕ್ಕು

ಬಾಲೆಂದೂ ಮುಳುಗದು
ಗುದ್ದಾಡುವುದು ಅಲೆಗಳ ಜೊತೆಗೆ
ಸೇರುವುದು ದಡ
ಇರಲಿ ವ್ಯವಧಾನ
ಮಾಡಿದ್ದಕ್ಕೆ ಜತನ ಸಿಗುವುದು ಪ್ರತಿಫಲ
ಅಂತರಗದ ಸಮಾಧಾನ

ಅಲೆಲೆಲೆಲೇ
ಅಲೆಯ ಮೇಲಿನ ಚೆಂಡು
ಕಾಣುತ್ತಿಲ್ಲ
-ವೆಂದರೆ
ಹೋಗಿಲ್ಲ ಮುಳುಗಿ
ಮತ್ತೆಲ್ಲೋ ಸಾಗಿಹುದು ದಿಟ
ಸೇರಿ ತಟ ಮುಂದುವರೆವುದು ಆಟ.
—————————————–

4 thoughts on “ಅಜಿತ್ ಹರೀಶಿಯವರ ಹೊಸ ಕವಿತೆ-ಅಲೆಯ ಮೇಲಿನ ಚೆಂಡು

Leave a Reply

Back To Top