ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಎಲ್ಲೋ ಹುಡುಕಿದೆ (ಕಾದಂಬರಿ)

:ಎಲ್ಲೋ ಹುಡುಕಿದೆ (ಕಾದಂಬರಿ)

ಲೇಖಕಿ ಶ್ರೀಮತಿ ಎಸ್ ಜೆ  ಸುಜಾತಾ

ಪ್ರಥಮ ಮುದ್ರಣ  ೨೦೧೦

ಚಾರುಮತಿ ಪ್ರಕಾಶನ ಬೆಂಗಳೂರು

ಶ್ರೀಮತಿ ಎಸ್ ಜೆ ಸುಜಾತಾ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂವೇದನಾಶೀಲ ಕೃತಿಗಳಿಂದ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಗಮನಾರ್ಹ ಕಾದಂಬರಿಗಾರ್ತಿ.  ಹಲವು ವರ್ಷಗಳಿಂದ ಬರೆಯುತ್ತಿರುವ ಇವರ ಕೃತಿಗಳು ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.  ಸಾಮಾಜಿಕ ಕಳಕಳಿಯ ಜೊತೆ ಜೊತೆ ಮನುಷ್ಯನ ಅಂತಃಕರಣದ ಅನಾವರಣ ಇವರ ಬರಹಗಳ ಹೆಗ್ಗಳಿಕೆ.  ಜನಪ್ರಿಯ ನೆಲೆಯಲ್ಲಿ  ಬರೆಯುತ್ತಿದ್ದರೂ ಅದನ್ನು ಮೀರಿದ ಗಂಭೀರ ಕಾಳಜಿಯನ್ನು ಇವರ ಕಾದಂಬರಿಗಳಲ್ಲಿ ನಾವು ನೋಡಬಹುದು.

ಪ್ರಸ್ತುತ ಕಾದಂಬರಿ “ಎಲ್ಲೋ ಹುಡುಕಿದೆ” ಇಂದಿನ ಮಧ್ಯಮ ವರ್ಗದವರ ಕಥೆ ತಂದೆ ರಾಜಶೇಖರ ತಾಯಿ ಪಾರ್ವತಿಯರ ಒಬ್ಬನೇ ಮಗ ಶ್ರೀಶ ಇಂದಿನ ಬಹುತೇಕರ ಹಾಗೆ ಹೆಚ್ಚಿನ ಓದು ಓದಿ ವಿದೇಶದಲ್ಲಿ ಕೆಲಸಕ್ಕೆ ಸೇರಿ ತಾಯಿ ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಹೊತ್ತವನು.  ಕಚೇರಿಯ ಪ್ರಾಜೆಕ್ಟ್ ನಿಮಿತ್ತ ನಾಲ್ಕು ವರ್ಷಗಳ ಕಾಲ ವಿದೇಶಕ್ಕೆ ಹೋಗಿ ಈಗ ಮರಳಿ ಬರುವ ಮೊದಲು ತಂದೆ ತಾಯಿಯರನ್ನು ಅಮೆರಿಕದ ಬೋಸ್ಟನ್ ಗೆ ಕರೆಸಿಕೊಳ್ಳಲು ಟಿಕೆಟ್ ಕಳಿಸಿರುತ್ತಾನೆ.  ಅಲ್ಲಿಂದ ಕಾದಂಬರಿ ಶುರು.  ಪಾರ್ವತಿಯವರು ಕಟ್ಟಿಕೊಳ್ಳುವ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಗೊಜ್ಜು ತೊಕ್ಕು ಪುಡಿಗಳ ಬಗ್ಗೆ ಅಪ್ಪ ಮಗನ ತಮಾಷೆ ಹಾಸ್ಯ ಮನಸೆಳೆಯುತ್ತದೆ .ಮಗ ಕಳುಹಿಸಿದ ಸಾವಿರ ಡಾಲರ್ ನಲ್ಲಿ ತಮ್ಮಿಷ್ಟದ ಮೈಸೂರು ಸಿಲ್ಕ್ ಮತ್ತು ಕಾಟನ್ ಸೀರೆಗಳನ್ನು ಒಟ್ಟೊಟ್ಗೆ ಖರೀದಿಸಿ  ಮಗ ಹೇಳುತ್ತಿದ್ದ ಮಾತು ನಿಜ ಮಾಡಿದನಲ್ಲಾ ಎಂದು ಸಂಭ್ರಮಿಸುವ ತಾಯಿ . ಇಂದಿನ ಎಷ್ಟೋ ಮನೆಗಳಲ್ಲಿ ನಡೆಯುವ ಸಂಗತಿ ಎನ್ನಿಸಿ ಆತ್ಮೀಯ ವೆನಿಸುತ್ತದೆ.  ತಾವು ತೋರಿಸಿದ ಹುಡುಗಿಯನ್ನೇ ಮಗ ಮದುವೆಯಾಗುತ್ತೇನೆ ಎಂದು ಹೇಳಿದ ಮಾತನ್ನು ಬಲವಾಗಿ ನಂಬಿರುವ ತಾಯಿಯ ಮನಃಸ್ಥಿತಿ ಕೆಲವೊಮ್ಮೆ ರಾಜಶೇಖರ್ ಅವರಿಗೆ ಭಯ ತರುತ್ತಿತ್ತು.  ಕನಸು ಚೂರಾದರೆ ಪತ್ನಿ ಅದನ್ನು ಸಹಿಸುವಳೆವ ಎಂದು .

ಮಗನ ಮನೆಗೆ ಬಂದ ತಂದೆ ತಾಯಿಗೆ ಏಕೋ ಏನೋ ಎಲ್ಲಾ ಸರಿ ಇಲ್ಲವೆಂಬ ಭಾವನೆ . ಕಾರ್ಯ ಬಾಹುಳ್ಯ ಎಂದು ಹೆಚ್ಚಾಗಿ ಮನೆಗೆ ಬಾರದ ಮಗ ಭೇಟಿಯಾಗಲು ಬರೆದ ಮಗನ ಗೆಳೆಯರೂ ಆದ ಸಂಶಯ ಹೆಚ್ಚಿಸುತ್ತದೆ . ಹಾಗೆ ಒಮ್ಮೆ ತಿರುಗಾಡಲು ಹೊರಗೆ ಹೋದ ಸಂದರ್ಭದಲ್ಲಿ ಭೇಟಿಯಾದ ಮಗನ ಗೆಳೆಯ ಇವರಿಗೆ ಎಲ್ಲ ವಿಷಯ ತಿಳಿದಿದೆ ಎಂದುಕೊಂಡು ಶ್ರೀಶಾ ವಿದೇಶೀಯಳನ್ನು ಮದುವೆಯಾಗಿದ್ದು ಈಗ ಆಕೆ ಹೆರಿಗೆಗಾಗಿ ಆಸ್ಪತ್ರೆ ಸೇರಿರುವುದನ್ನು ತಿಳಿಸುತ್ತಾನೆ . ತಂದೆಗೆ ಮುಖತಃ ಹೇಳಲು ಅಂಜಿ ವಿಷಯದ ಬಗ್ಗೆ ಪತ್ರ ಬರೆದು ತಾಯಿಯನ್ನು ಒಪ್ಪಿಸುವ ಭಾರ ಇವರ ಮೇಲೆ ಹಾಕುತ್ತಾನೆ ಮಗ.  .ಅಷ್ಟರಲ್ಲಿ ಆಸ್ಪತ್ರೆಯಿಂದ ಬರುವಾಗ ಶ್ರೀಶ ಮತ್ತು ಅವನ ಪತ್ನಿಗೆ ಅಪಘಾತವಾಗಿ ಅವನ ಪತ್ನಿ ಸತ್ತು ಮಗು ಬದುಕುಳಿಯುತ್ತದೆ . ತಂದೆ ತಾಯಿಗೆ ಅದನ್ನು ಸಾಕುವ ಜವಾಬ್ದಾರಿ ವಹಿಸಿ ಮಗುವಿಗೆ ಹದಿನೆಂಟು ವರ್ಷವಾದಾಗ ಅವಳಿಗೆ ಭಾರತದಲ್ಲಿರುವ ಅಥವಾ ಅಮೆರಿಕಾಗೆ ಬರುವ ನಿರ್ಧಾರ ಬಿಡಬೇಕೆಂದು ಹೇಳಿ ಪ್ರಾಣ ಬಿಡುತ್ತಾನೆ ಶ್ರೀಶ ಸಹ . ಜರ್ಝರಿತರಾಗಿ ಮೊಮ್ಮಗುವಿನೊಂದಿಗೆ ಭಾರತಕ್ಕೆ ಹಿಂದಿರುಗಿದ ಅಜ್ಜಿ ತಾತನಿಗೆ ಅದನ್ನು ಸಾಕುವ ಜವಾಬ್ದಾರಿ ನೆಂಟರಿಷ್ಟರ ಕುಹಕದ ನೋಟ ಅಣಕು ಮಾತುಗಳ ಭರ್ತ್ಸನೆ ಯನ್ನು ಸಹಿಸುವ ಕಷ್ಟ  ಬೇರೆ. . ನೋಡಲು ವಿದೇಶೀಯಳಂತೆಯೇ ಇರುವ ಮಗುವಿಗೆ ಸ್ಮಿತಾ ಎಂದು ಹೆಸರಿಟ್ಟು ಸಂಪ್ರದಾಯ ರೀತಿಯೇ ಸಾಕುತ್ತಾರೆ.  ಹದಿನೆಂಟನೇ ಹುಟ್ಟುಹಬ್ಬದ ದಿನ ಅವಳ ತಂದೆಯ ಇಚ್ಛೆಯಂತೆ ನಿರ್ಧಾರ ಮಾಡುವ ಅವಕಾಶ ಕೊಡುತ್ತಾರೆ . ವಿದೇಶದಲ್ಲಿದ್ದ ಗೆಳತಿಯ ಸಹಾಯದಿಂದ ತಾಯಿಯ ಕಡೆಯ ಅಜ್ಜಿ ತಾತ ನೆಂಟರುಗಳ ಸಂಪರ್ಕ ಸಾಧಿಸಿದ ಸ್ಮಿತಾ ಬೋಸ್ಟನ್ ಗೆ ತನ್ನ ತಾಯಿಯ ಊರಿಗೆ ಹೊರಡುವ ಏರ್ಪಾಡು ಮಾಡಿಕೊಳ್ಳುತ್ತಾಳೆ . ಅಜ್ಜಿ ಪಾರ್ವತಿಗಂತೂ ಮೊಮ್ಮಗಳ ಅಗಲಿಕೆಯಿಂದ ಕಂಗಾಲಾಗಿ ಹಾಸಿಗೆ ಹಿಡಿಯುತ್ತಾಳೆ ಅತ್ತ ಅಲ್ಲಿ ತಾಯಿಯ ಕಡೆಯ ಸಂಬಂಧಿಗಳನ್ನು ಭೇಟಿಯಾಗುತ್ತಾಳೆ. ಇವಳಿಗೆ ತುಂಬಾ ಸಂಭ್ರಮದ ಸ್ವಾಗತವೇ ಸಿಗುತ್ತದೆ . ಸ್ಮಿತಾ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ತಂದೆಯ ಭಾರತೀಯ ಮೂಲ ಅಜ್ಜಿ ತಾತರ ಮಮತೆಯ ಬಂಧ ಕಟ್ಟಿ ಹಾಕುತ್ತದೆಯೇ ಅಥವಾ ಬಿಟ್ಟು ಹೋಗಿದ್ದ ತಾಯಿ ಕಡೆಯವರ ಸೆಳೆತ ಗಟ್ಟಿಯಾಗುತ್ತದೆಯೇ   ತಿಳಿಯಬೇಕು ಎಂದರೆ ನೀವು ಕಾದಂಬರಿಯನ್ನೇ ಓದಬೇಕು.

ತುಂಬ ಹಿಡಿಸಿದ್ದು ಎಂದರೆ ಕಣ್ಣೆದುರಿಗೆ ನಡೆಯುವಂತಹ ಚಿತ್ರಣದ ಘಟನಾವಳಿಗಳು ಮಾನವ ಸಹಜ ನಡವಳಿಕೆಗಳು.  ಮಗನ ಕರುಳು ಬಳ್ಳಿ ಎಂದು ಮೊಮ್ಮಗುವನ್ನು ಜತನಗೈಯುವ ವೃದ್ಧ ದಂಪತಿಗಳ ಮಮತೆ ಮತ್ತು ಕಮಿಟ್ಮೆಂಟ್.  ತನಗರಿವಿಲ್ಲದಂತೆಯೇ ನಡೆಯುವ ಘಟನೆಗಳಿಗೆ ತುತ್ತಾಗುತ್ತಾ ಇರುವ ವಿಷಯ ಮುಚ್ಚಿಡುವ ಶ್ರೀಶನ  ದ್ವಂದ್ವ ವ್ಯಕ್ತಿತ್ವ  ತುಂಬಾ ಸುಂದರವಾಗಿ ನಿರೂಪಿತವಾಗಿದೆ.  ಇಂದಿನ ತಾಯಂದಿರು ಕುರುಡಾಗಿ ಮಕ್ಕಳಿಂದ ನಿರೀಕ್ಷಿಸುವ ನಡವಳಿಕೆಯೂ ಇದಕ್ಕೆ ಒಮ್ಮೊಮ್ಮೆ ಕಾರಣವಾಗಬಹುದು . ಇಲ್ಲಿ ಸ್ಮಿತಾಳ ಪರಿಸ್ಥಿತಿಯೂ ಅಷ್ಟೇ ಎಲ್ಲರ ಜೊತೆಗಿದ್ದರೂ ನಾನು ಅವರಂತಲ್ಲ ಎಂದು ತಿಳಿಯುವ ಮಗುವಿನ ಮನಸ್ಥಿತಿ ಅರ್ಥ ಮಾಡಿಕೊಳ್ಳದ ವಯಸ್ಸಿಗೆ ಹೇಗೆ ತಿಳಿಹೇಳುವುದು ಎಂಬ ಅಜ್ಜಿ ತಾತನ ಅಸಹಾಯಕತೆ ಬಗ್ಗೆ ಒತ್ತು ಕೊಟ್ಟು ಬರೆದಿದ್ದಾರೆ . ಒಂದು ಸಂದರ್ಭದಲ್ಲಿ ಪಾರ್ವತಿ ಹೇಳುತ್ತಾರೆ ಮಗ ಬದುಕಿದ್ದರೆ ಸಾಕಿತ್ತು ಅವನನ್ನು ಕ್ಷಮಿಸಿ ಮದುವೆಯನ್ನು ಒಪ್ಪಿಕೊಳ್ಳುತ್ತಿದ್ದೆ ಅಂತ . ಆಗನಿಸಿದ್ದು ಚಿಕ್ಕ ಕಷ್ಟವನ್ನೇ ಬೃಹತ್ ಎಂದುಕೊಂಡು ಕೊರಗುವಾಗ ಇದು ಏನೇನೂ ಅಲ್ಲ ಅನ್ನಿಸಲು ಇನ್ನೂ ದೊಡ್ಡ ಕಷ್ಟವೇ ಬರಬೇಕೇನೋ ಅಂತ .  “ಎಲ್ಲೋ ಹುಡುಕಿದೆ” ಶೀರ್ಷಿಕೆಯೂ ಸಹ ತುಂಬಾ ಅನುರೂಪ.  ಜಿಎಸ್ಎಸ್ ಅವರ ಪ್ರಸಿದ್ಧ ಈ ಭಾವಗೀತೆಯಂತೆ ಇಲ್ಲೇ ಇರುವ ಸ್ನೇಹ ಪ್ರೀತಿಗಳನ್ನು ಗುರುತಿಸಿಕೊಳ್ಳಬೇಕು.  ಎಲ್ಲೋ ಇಲ್ಲ ದೇವರು ನಮ್ಮೊಳಗೆಯೇ ಇದ್ದಾನೆ .

ಒಂದು ತರಹದ ವಿಭಿನ್ನ ಕಥಾವಸ್ತು ಚಿಂತನೆಗೆ ಒರೆಹಚ್ಚುವ ಕಾದಂಬರಿ.


                                   ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top