ಕಾವ್ಯ ಸಂಗಾತಿ
ಸಾಯುವ ಸಂಜೆ ಸಮಯ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಇನ್ನೇನು ದಿನವೊಂದು ಸಂಜೆಯತ್ತ
ಬಾಗುವ ಹೊತ್ತು
ಸೂರ್ಯ ರಥ ಸಹ ಪಡುವಣದತ್ತ
ಹೊರಳುವ ಹೊತ್ತು
ಅತ್ತಲ ಆಗಸದಲಾಗಲೆ ಕೆಂಪು ಕುಂಚ
ತನ್ನ ನೆಚ್ಚಿನ ಕಲೆಯಲಿ ತೊಡಗಿದೆ
ಸಂಜೆಯನಂತ ಚಾದರ
ಕಾಲಿಂದ ತಲೆಯತ್ತ ಎಳೆದಿದೆ ಮೌನ!
ಸಂಜೆ ದೃಶ್ಯ
ಎಲ್ಲ ಕಂಗಳಲು ಇರದು
ಒಂದೆ ಮಾದರಿ
ಕೆಲ ಕಣ್ಣುಗಳಲಿ ಬಣ್ಣಗುರುಡು
ಕೆಲವು ಅತಿ ತೀಕ್ಷ್ಣ
ಲೇಸರ್ ಕಿರಣಗಳು
ಎಲ್ಲ ಇದ್ದೂ ಏನೂ ಇಲ್ಲದ ಹಾಗೆ
ಬರಡುಗಣ್ಣು ಕೆಲವು
ಪೊರೆ
ಸಮೀಪದೃಷ್ಟಿ
ದೂರದೃಷ್ಟಿ
ಮುಂತಾಗಿ ಕಾಯಿಲೆಗಳ ಕಣ್ಣುಗಳು
ಎಲ್ಲ ಥರ ವೈವಿಧ್ಯ ಹರಹು
ಈ ಜಗತ್ತು!
ಅಂತೆಯೇ ಅಲ್ಲವೆ ಈ ದೇಹದ
ಇನ್ನಿತರ ಭಾಗಗಳ ಬಾಬತ್ತು?
ಸಂಜೆಯಲಿ ಸೂರ್ಯ ಪಶ್ಚಿಮದ
ಕ್ಷಿತಿಜದಾಚೆ ಮಲೆಗಳಲಿಳಿವ ಸಮಯ
ಕೊಂಕು ಗೀರುಗಳಿರದ
ನಿರಂಬಳ ಮೊಗದಲಿ ನಿಧಾನ ಮಾಯ
ಎಂಥ ಸೊಗಸಿನಂತರ್ಧಾನ!
ಪಶ್ಚಿಮದಲಿ ಭಾರಿ ಹಂಡೆ
ನಿಧಾನ ಆರುವ ಉರಿಗೆ
ಕೆಂಪು ಹಳದಿ ಮಿಶ್ರಿತ ಬಣ್ಣದ
ವಿವಿಧ ವಿಲಕ್ಷಣ ಸೋಜಿಗ
ಚಿತ್ತಾರಗಳ ಮಹಾಕುಂಚದಲಿ
ಚಮತ್ಕಾರ ಹರಡಿ ಹರಡುತ್ತ
ಕ್ರಮೇಣ ಬೆಳಕಿನೊಲೆ ಇಂಗುತ್ತ
ಕತ್ತಲೆ ಆಗರದೊಳಗೆ ಸಂಜೆಯ ಸಾವು!
ಬಿಕ್ಕಳಿಕೆಗಳ ಗಾಢ ಮಬ್ಬು ಸಂಜೆ
ಮೇಲೆ ನೇಸರನಿಳಿವ ದಿಕ್ಕು
ಆನೆ ಹಿಂಡುಗಳ ಸ್ವೇಚ್ಛಾ ಸಂಚಾರ
ಕಠೋರ ಸದ್ದುಗದ್ದಲ
ಗುಡುಗು ಮಿಂಚು ಸಿಡಿತದ ಸೊಕ್ಕು
ಮುಳುಗಿನಲು ಆಗಸದಲಿ
ಕಿತ್ತು ತಿನ್ನುವ ನೋವು
ತುಂಬಿದ ಗರ್ಭ ಹೊತ್ತ ಆ ದಿಕ್ಕು
ಯಾವ ಸಂಜೆಯ ಬಯಕೆ?
ನಿರಂತರ ನೆಮ್ಮದಿ ಸಂಜೆ
ಮತ್ತದರ ಮುಳುಗು
ಎಲ್ಲ ಕಣ್ಣುಗಳಲಿ ತುಳುಕುವ
ಉತ್ಕಟ ಆಕಾಂಕ್ಷೆ…!
ಚಾದರ ಎಳೆದಿದೆ ಮೌನ — ಚೆನ್ನಾಗಿದೆ ಸರ್.
ಸರಳವಾಗಿ ಹೇಳಿದ ಬದುಕಿನ ಪಯಣ, ಸುಂದರ, ಸ್ವಾರಸ್ಯಕರ ಸಾಲುಗಳು…