ಕಾವ್ಯ ಸಂಗಾತಿ
ಹುಡುಕುತ್ತಿದ್ದೆನೆ !
ಪ್ರೊ ರಾಜನಂದಾ ಘಾರ್ಗಿ
ಏನಾಗ ಹೊರಟಿದ್ದೆ ಏನಾದೆ ನಾನು
ದಿಗಂತದತ್ತ ದೃಷ್ಟಿ ನಟ್ಟು ಏರುತ್ತಾ
ದಿಗಂತದಾಚೆ ಬ್ರಹ್ಮಾಂಡವನ್ನ
ಅಳೆಯಲು ಹೊರಟಿದ್ದೆ
ಬಿಸಿಲಿಗೆ ಕರಗದೆ ಮಳೆಗೆ ನೆನೆಯದೆ
ಪ್ರಕೃತಿಯನ್ನು ಎದುರಿಸುತ್ತ
ತೆಲೆ ಎತ್ತಿ ಎದೆಯುಬ್ಬಿಸಿ ನಿಂತ
ಹೆಬ್ಬಂಡೆಯಾಗ ಬಯಸಿದ್ದೆ
ತೊರೆಯಾಗಿ ಹರಿಯುತ್ತ
ಅಡ್ಡ ಬಂದ ಹೆಬ್ಬಂಡೆಗಳ
ಕೊರೆಯುತ್ತಾ ಮೊರೆಯುತ್ತ
ನದಿಯಾಗ ಬಯಸಿದ್ದೆ
ಭೋರ್ಗರೆದು ಕಂದರಗಳ ಅರಸುತ್ತ
ಜಲಪಾತಗಳ ನಿರ್ಮಿಸುತ್ತ
ಸಾಗರದ ಆಳವನ್ನು ಹೊಕ್ಕು
ಶೋಧಿಸ ಬಯಸಿದ್ದೆ
ಅಣುಗಳ ಗರ್ಭಭೇಧಿಸುತ್ತಾ
ಕೇಂದ್ರಗಳಲ್ಲಿ ಅಡಗಿದ ಶಕ್ತಿಯನ್ನು
ಕೆದರಿ ಪೋಷಣೆ ಮಾಡಿ
ಶಕ್ತಿಯ ಕೇಂದ್ರವಾಗ ಬಯಸಿದ್ದೆ
ನಿನ್ನ ಪ್ರೀತಿಯ ಬಿಸಿಗೆ ಕರಗಿ
ಮಿದುವಾಗಿ ಹದವಾಗಿ
ನೀನು ಬಿತ್ತಿದ್ದನ್ನು ಬೆಳೆಯುತ್ತಾ
ನೋಡುತ್ತಾ ಮೋಹಿತಳಾಗಿದ್ದೇನೆ
ಮರೆತದ್ದನ್ನು ನೆನೆಯುತ್ತಾ
ಗಳಿಸಿದ್ದನ್ನು ಅಳೆಯುತ್ತಾ
ಕಳೆದುಕೊಂಡ ಅಸ್ತಿತ್ವವನ್ನು
ಕಣ್ಣರಳಿಸಿ ಹುಡುಕುತ್ತಿದ್ದೇನೆ
ವಾವ್…..ಎಷ್ಟು ಸಿಂಪಲ್ಲಾಗಿ ಹೇಳ್ಬಿಟ್ರೀ ಮೇಡಂ….ನಮ್ಗಳ ಕಥೆನಾ….ಚೆಂದ ಚೆಂದ….
ಮೆಚ್ಚಿಗೆಗೆ ಧನ್ಯವಾದಗಳು ಮಮತಾ