ಅರುಣಾ ನರೇಂದ್ರ ಕವಿತೆ-ಸಾಮ್ಯತೆ

ಕಾವ್ಯ ಸಂಗಾತಿ

ಸಾಮ್ಯತೆ

ಅರುಣಾ ನರೇಂದ್ರ

ನಾನೂ ನಿನ್ನ ಹಾಗೇನೇ ಹೋರಾಡುತ್ತೇನೆ
ತಾಯ ಗರ್ಭದೊಳಗಿಂದ
ಮೊಳಕೆಯೊಡೆಯುತ್ತಲೇ

ಹೋರಾಟ ಅನಿವಾರ್ಯ ವೆಂದೇ
ಶಕ್ತಿ ಪಡೆಯುತ್ತೇನೆ
ನನ್ನೊಳಗಿಂದ
ಆಳವಾಗಿ ಬೇರಿಳಿಸಿ
ಗಟ್ಟಿಯಾಗಿ ನಿಲ್ಲಲು |

ಎದೆ ನಡುಗಿಸುವ
ಬೆಂಕಿ ಬಿರುಗಾಳಿಗಿಂತಲೂ
ಹೆಚ್ಚು ಭಯ ಪಡುತ್ತೇನೆ
ಮುರಿಯುವ ಚಿವುಟುವ ಕೈಗಳಿಗೆ !
ಆದರದೇ ನನ್ನೊಳಗನ ಶಕ್ತಿ
ನನ್ನ ಮತ್ತೆ ಪುಟಿದೆಬ್ಬಿಸುತ್ತದೆ

ಭಾವನೆಗಳ ಕಳೆದುಕೊಂಡು
ಬೆತ್ತಲಾದಾಗಲೆಲ್ಲ ಕಾಣುತ್ತೇನೆ
ನಿನ್ನದೇ ಅಸ್ತಿಪಂಜರ
ಎಂತಹ ಸಾಮ್ಯತೆ !

ಮೈನವಿರೇಳಿಸುವ
ಕನಸುಗಳ ಚಿಗುರಿಸುವ
ಬದುಕಿಗೆ ಬಣ್ಣವೇರುವ
ಘಳಿಗೆಗಾಗಿ ಕಾಯುತ್ತೇನೆ |

ಬದುಕು ಭಾರವ ಹೊತ್ತು
ಬೀಗುತ್ತೇನೆ ತೂಗುತ್ತೇನೆ
ಹೂವಾಗಿ ಕಾಯಾಗಿ ಹಣ್ಣಾಗಿ
ಮಣ್ಣಲ್ಲಿ ಮತ್ತೆ ಮೊಳಕೆಯಾಗುತ್ತೇನೆ !|


Leave a Reply

Back To Top