ಕಾವ್ಯ ಸಂಗಾತಿ
ನಗು ಮುಖ
ಅರುಣಾ ಶ್ರೀನಿವಾಸ
ಹಾಗೆಯೇ ನಗುತ್ತಾ
ಆಕಾಶದಲಿ ಹಾರಾಡುತ್ತಿದ್ದ
ಬಲೂನೊಂದು
ಒಡೆದು ಟುಸ್ಸೆಂದು
ಹೇಳ ಹೆಸರಿಲ್ಲದೆ
ಚೆಲ್ಲಾಪಿಲ್ಲಿಯಾಗುತ್ತದೆ….
ಬಾಳಿನ ಯಾವುದೋ
ಒಂದು ಕವಲಿನಲ್ಲಿ ಹಾಗೆಯೇ..
ಕನಸುಗಳು ಮೊಳೆತು
ಬೆಳೆದು ಗರಿಬಿಚ್ಚಿ ಅರಳಿಕೊಳ್ಳುವವರೆಗೂ
ವ್ಹಾವ್…
ಬದುಕೆಂದರೆ ಎಷ್ಟೊಂದು ಸುಂದರ
ಕವಿತೆಯ ಜಾಡೊಳಗೂ ಸಿಗದ
ಅದ್ಭುತ ಭಾವ ಹಂದರ…
ಆಗಲೇ ನೋಡು…
ಒಡೆದು ಚೂರಾಗುವ
ನಿರ್ದಯಿ ಕನಸುಗಳು…
ಜೊತೆಯಾಗುತ್ತವೆ
ಹೂವು ಮುಳ್ಳುಗಳಾಟಕೆ…
ಎದೆಯ ಭಾರವ ಹೊತ್ತು
ಒಂಟಿಯಾಗಿ ನಡೆಯುವುದೇ
ಆಗೊಂದು ಹರಸಾಹಸ….
ಹುಟ್ಟಿದ್ದ ರೋಷ ದ್ವೇಷಗಳೆಲ್ಲ
ಅಪ್ಪ ಅಮ್ಮನಿಲ್ಲದೆ
ಅನಾಥವಾಗಿ ಬಿಡುತ್ತವೆ…
ಹುಟ್ಟಷ್ಟೇ ಮುಖ್ಯ
ಆಡಿಕೊಳ್ಳುವ ನಾಲಗೆಗೆ…
ಯಾವುದೂ ಹೊರ ಬರಬಾರದು ನೋಡು…
ಈ ಸಮಾಜದ ಅಸಹ್ಯ ಪಾಡು…
ಎಲ್ಲವೂ ಎದೆಯೊಳಗೆ
ಹೆಪ್ಪುಗಟ್ಟಿದ ತ್ರಿಶಂಕು ಸ್ಥಿತಿ…
ಅಬ್ಬಾ…
ಬಾಳು ಏನೆಲ್ಲಾ ಕಲಿಸಿ ಬಿಡುತ್ತದೆ
ನೋವಿನಿಂದ ನಡೆವ
ಈ ಒಂಟಿ ಜೀವಕ್ಕೆ..
ನಗುವಷ್ಟೇ ಜಂಟಿಯಾಗಬೇಕು…..
ಮುಖದ ಮೇಲಾದರೂ….