ಕಮಲಾ ರಾಜೇಶ್-ಸ್ವಾಮಿ ವಿವೇಕಾನಂದ,ಕವಿತೆ

ಕಾವ್ಯ ಸಂಗಾತಿ

ಸ್ವಾಮಿ ವಿವೇಕಾನಂದ

ಕಮಲಾ ರಾಜೇಶ್

ವಿಶ್ವನಾಥರ ಪುತ್ರ ರಾಮಕೃಷ್ಣರ ಶಿಷ್ಯ
ವಿಶ್ವಾಸವನು ತುಂಬಿ ಮೇಲೇರಿದ
ನಿಸ್ವಾರ್ಥ ಸೇವೆಯಲಿ ಭಾರತಾಂಬೆಗೆ ನಮಿಸೆ
ವಿಶ್ವಕ್ಕೆ ಮಾದರಿಯು ಕಮಲಾತ್ಮವೆ

ಭುವನೇಶ್ವರಿಯ ಪುಣ್ಯ ಗರ್ಭದಲಿ ಜನಿಸಿದರು
ನವರಸದ ಭಕ್ತಿ ತೋರಣವ ಕಟ್ಟಿ
ಭುವನವನು ಬೆಳಗಿಸುತ ದಿವ್ಯತೆಯ ತೋರಿದರು
ನವಭಾರತಕೆ ಶಕ್ತಿ ಕಮಲಾತ್ಮವೆ

ರಾಷ್ಟ್ರೀಯ ಯುವದಿನದಿ ಭಾರತಾಂಬೆಯ ಸುತರು
ಶ್ರೇಷ್ಠರನು ನೆನೆದು ಮುಕ್ತಕವ ಬರೆವೆ
ರಾಷ್ಟ್ರೀಯ ಏಳಿಗೆಗೆ ಹಗಲಿರುಳು ದುಡಿದವಗೆ
ನಿಷ್ಠೆಯಲಿ ವಂದಿಸುವೆ ಕಮಲಾತ್ಮವೆ

ಹಿಂದುಧರ್ಮದ ಸಾರ ದೇಶದೆಲ್ಲೆಡೆ ಹಂಚಿ
ಬಂಧನವ ಬಿಡಿಸಿದರು ಧೈರ್ಯತುಂಬಿ
ಚಂದನದ ಕೊರಡಂತೆ ತಮ್ಮನ್ನೆ ತಾ ಸವೆಸಿ
ಮುಂದಡಿಯನಿರಿಸಿದರು ಕಮಲಾತ್ಮವೆ

ಕವಿಯಾಗಿ ಹಲವಾರು ಸದ್ಗ್ರಂಥವನು ಬರೆದು
ಯುವಜನಕೆ ಶಕ್ತಿ ತುಂಬಿದರು ಅಂದು
ನವಯುಗದ ಹರಿಕಾರ ಭಾರತದ ನಕ್ಷತ್ರ
ಭುವನ ಬೆಳಗಿದರಾಗ ಕಮಲಾತ್ಮವೆ

ರಾಜಯೋಗವ ಬರೆದು ಹೊಸಹರುಷ ತುಂಬಿದರೆ
ಈಜಗದ ದೈವ ಎಂದರಸೆ ಜನರು
ಮೂಜಗವು ಮೆಚ್ಚಿ ಆನಂದ ಬಾಷ್ಪವ ಸುರಿಸೆ
ಈಜಗಕೆ ಮಾದರಿಯು ಕಮಲಾತ್ಮವೆ

ಕರ್ಮಯೋಗವನಿತ್ತು ಜನರಿಗಾಶ್ರಯವಿತ್ತು
ನಿರ್ಮಲತೆ ತುಂಬಿ ಹರಸಿದರು ಜನರ
ಕರ್ಮಭೂಮಿಯ ತುಡಿತ ಮನದೊಳಗೆ ಚಿಮ್ಮುತಿರೆ
ಧರ್ಮಾತ್ಮ ಕಲಿಜನಕೆ ಕಮಲಾತ್ಮವೆ

ಭಕ್ತಿಯೋಗವ ರಚಿಸಿ ಭಾರತೀಯರ ಮನಕೆ
ಶಕ್ತಿಯನು ತುಂಬಿ ನಲಿದಂಥ ಶಕ್ತಿ
ರಿಕ್ತ ಹಸ್ತಕೆ ಶಕ್ತಿ ಕೊಟ್ಟಂಥ ಪರಮನಿಗೆ
ಭಕ್ತಿಯಲಿ ಪೊಡಮಡುವೆ ಕಮಲಾತ್ಮವೆ

ಅದ್ವೈತ ವೇದಾಂತ ಶಾಸ್ತ್ರಗಳ ಬರೆದಿತ್ತ
ಸಿದ್ಧಿ ಸಾಧಕರವರು ಭೂತಳದಲಿ
ಎದ್ದೇಳಿ ಎಚ್ಚರದಿ ಗುರಿಯ ಸಾಧಿಸಿರೆಂದ
ಸದ್ಗುರುವ ನೆನೆಯುವೆನು ಕಮಲಾತ್ಮವೆ

ನಿನ್ನಗುರಿ ಆತ್ಮದರ್ಶನವು ನಿಮ್ಮೊಳಗೆ ಇದೆ
ಅನ್ಯರಲಿ ಹುಡುಕಿ ಫಲವಿಲ್ಲವೆಂದು
ನಿನ್ನೊಳಗೆ ತುಂಬಿರುವ ಆತ್ಮವಿಶ್ವಾಸದಲಿ
ಉನ್ನತಿಕೆ ಗಳಿಸೆಂದ ಕಮಲಾತ್ಮವೆ

ಕೇಳಿ ಯುವಕರೆ ಕೇಳಿ ಬಂಧು ಬಳಗವೆ ಕೇಳಿ
ತಾಳ್ಮೆಯನು ತುಂಬಿ ನಲ್ನುಡಿಯ ಕೇಳಿ
ಊಳಿಗರ ರಕ್ಷಣೆಯು ನಮ್ಮ ಮೇಲಿದೆ ಕೇಳಿ
ಬಾಳ ತೇರನು ಹಿಡಿದು ಕಮಲಾತ್ಮವೆ

ಧರ್ಮ ಸಂಸ್ಕಾರವನ್ನು ಜಗತ್ತಿಗೇ ತಿಳಿಸಿ
ಕರ್ಮಭೂಮಿಯನು ಕಾಪಾಡಿಯೆಂದ
ನಿರ್ಮಲತೆ ತುಂಬಿದ ವಿವೇಕಾನಂದರ ಸೇವೆ
ಕರ್ಮಯೋಗಿಯ ರೀತಿ ಕಮಲಾತ್ಮವೆ

ಜೀವ ನಮ್ಮಗಳ ಮಾತನ್ನು ಕೇಳುವುದಿಲ್ಲ
ಯಾವಾಗಲಾದರೂ ಹೋಗಬಹುದು
ಜೀವನವು ನಮ್ಮ ಮಾತುಗಳನ್ನು ಕೇಳುವುದು
ಜೀವನದಿ ರೂಪಿಸಿಕೊ ಕಮಲಾತ್ಮವೆ

ಭಾರತಾಂಬೆಯ ಕೀರ್ತಿ ಹೊರದೇಶದಲಿ ಹೇಳಿ
ರಾರಾಜಿಸಿದರೈ ವಿವೇಕಾನಂದ
ವೀರವೇಶದಿ ನುಡಿದ ದಿಟ್ಟೆದೆಯ ಗುಣನಿಧಿಗೆ
ಗೌರವದ ನಮನಗಳು ಕಮಲಾತ್ಮವೆ

ಗುರುವಿಗೆ ಗುಲಾಮನಾಗುವತನಕ ಮನುಕುಲಕೆ
ದೊರೆಯುವುದೆ ಮುಕ್ತಿ ಎಂದನು ನರೇಂದ್ರ
ಗುರುವನ್ನು ಹೊರೆಹಚ್ಚಿ ನೋಡಿದಾ ಧೀಶಕ್ತಿ
ಪರಮಹಂಸರ ಕಂಡ ಕಮಲಾತ್ಮವೆ

ಯುವಕರಲಿ ದೇಶಭಕ್ತಿಯನು ಬಡಿದೆಬ್ಬಿಸಿದ
ಯುವತರುಣರು ವಿವೇಕಾನಂದ ಗುರುವು
ಭವಬಂಧನವ ಸರಿಸಿ ವಿಶ್ವವನೆ ಸುತ್ತಿದರು
ದಿವಸಕರ ತೇಜದಲಿ ಕಮಲಾತ್ಮವೆ

ಮುನ್ನಡೆಯ ಸಾಧಿಸಲ್ ಸ್ವಾಭಿಮಾನವ ಹುಡುಕಿ
ಸನ್ನಡತೆ ಕಂಡು ಬಾಗುವುದು ಜಗವು
ಮನ್ನಣೆಯ ನೀಡಿದರೆ ಭಾರತಿಯ ಯೋಧರಿಗೆ
ಉನ್ನತಿಕೆ ಶತಸಿದ್ಧ ಕಮಲಾತ್ಮವೆ

ಓ ಯುವಕರೇ ಏಳಿ ಎದ್ದೇಳಿ ಎನ್ನುತ್ತ
ಕಾಯಕವ ಸಾರಿದ ವಿವೇಕಾನಂದ
ಬಾಯಾರಿ ಕುಳಿತವರು ಮೇಲೆದ್ದು ನಿಂತಿಹರು
ತಾಯಿ ರಕ್ಷಣೆ ಬಯಸಿ ಕಮಲಾತ್ಮವೆ

ನೀತಿ ಮರವನು ಬೆಳೆಸಿ ಎಂದು ಸಾರಿದ ಜಗಕೆ
ನೀತಿಯನು ತುಂಬಿದ ವಿವೇಕಾನಂದ
ಜಾತಿಚಂದನದಂತೆ ಭಾರತವು ಬೆಳಗಿದರೆ
ಭೂತಾಯಿ ಮುದಗೊಂಡ ಕಮಲಾತ್ಮವೆ

ಅನ್ಯಾಯದಾ ಮಾರ್ಗವನು ಹಿಡಿಯದಿರು ಮನುಜ
ಅನ್ಯಾಯವೆಸಗೆ ನಶ್ವರವು ದೇಹ
ಕನ್ಯೆಯರ ಸೆರೆಬಿಡಿಸಿ ಧೈರ್ಯವನು ತುಂಬಿದರೆ
ಮನ್ನಣೆಯ ಹರಿಕಾರ ಕಮಲಾತ್ಮವೆ


Leave a Reply

Back To Top