ಕಾವ್ಯ ಸಂಗಾತಿ
ಕವಿತೆ
ಅಭಿಜ್ಞಾ ಪಿ.ಎಮ್.ಗೌಡ
ಕವಿತೆ ಎಂದರೆ….
ಪ್ರಸವ ವೇದನೆಯಲಿ
ಹೆಣ್ಣೊಬ್ಬಳ ಆಕ್ರಂದನದ
ನರಳುವಿಕೆಯ ಚೀತ್ಕಾರ.!
ಆಗ ತಾನೆ ಚಿಗುರೊಡೆಯುತಿಹ
ತರುಲತೆಗಳ ಪರ್ಣ
ಕಣ್ಣಿಗದುವೆ ಹಬ್ಬದ ವರ್ಣ
ಮನದಾಳದಲಿ ನೆಲೆ ನಿಂತ
ಹನಿಗಳಿಂದಾದ ಅರ್ಣ…
ಕವಿತೆ ಎಂದರೆ….
ಉಕ್ಕುತಿಹ
ಜ್ವಾಲಾಮುಖಿಯೊಳಗಿನ
ಕಿಡಿಗಳ ದ್ಯೋತ
ಬಿಕ್ಕುತಿಹ ರೈತನ ಮೊಗದ
ಅಗಣಿತ ರೇಖೆಗಳಲಿ
ಆಕ್ರಂದಿಸೊ ಅಪರಿಮಿತ
ನೋವುಗಳ ಶ್ವಸಿತ…
ವದ್ಯದೊಳಗಿನ ಸಂಸ್ಕಾರ
ಗದ್ಯದೊಳಗಿನ ಚಮತ್ಕಾರ
ಆಗಾಗ್ಗೆ ಬಂದ್ಹೋಗುವ
ಭಾರಿ ಮನೊವೇದನೆಗಳ ಸಾದರ…
ಕವಿತೆ ಎಂದರೆ….
ಅಂತಃಪಟಲದೊಳಗಣ
ಅವಿತ ಭಾವೋದ್ವೇಗ
ಅರಿತ ಮನೋವೇಗ
ಕವಿದು ಮಸುಕಾಗಿಹ ಅಭೀಷ್ಟಗಳು..!
ಗಡಿಯಾಚೆ ತೇಲುವ
ಗುಡಿಯೊಳಗೆ ಹಾಡುವ
ಗರಿಗೆದರಿ ಕುಣಿಯುತ
ಹಪಹಪಿಸಿ ಮೇಲೇಳೊ
ಭಾವಾಂತರಂಗಗಳು…!
ಕವಿತೆ ಎಂದರೆ….
ಕಾದಲನ ಸಾಂಗತ್ಯಕ್ಕಾಗಿ
ತಳಮಳಿಸೊ ಮನ
ಹುಡುಕಾಡೊ ಗುಣ
ಅವನೊಂದಿಗೆ
ವಿಹರಿಸಿದ ಸತ್ಕಾಲದ ಸಂಪ್ರೀತಿ
ಸದ್ಭಾವದ ಸಂತೃಪ್ತಿ
ಸಾಮರಸ್ಯದ ಸಂಸ್ಕೃತಿ ಈ ದ್ಯುತಿ…
ಮುಂಜಾನೆಯ ತುಷಾರನ
ಪರ್ಣದೊಳಗಿನ ಮಿಲನ
ಉದಯಿಸೊ ಇನನೊಳಗಿನ
ನಿಷ್ಟುರತೆ
ಕಾರ್ಯತತ್ಪರತೆಯ ಪ್ರಗಾಥೆ
ಪ್ರೀತಿಯೊಳಗಣದ
ನಿಷ್ಕಲ್ಮಶ ನಿಸ್ವಾರ್ಥ ರೀತಿ
ಸದ್ವಿಕಾಶ ಸಂಚಾರದ ದ್ಯುತಿ
ಸಂಸ್ಕಾರದ ಸತ್ಕೃತಿಯ ಪ್ರಣತೆ….!
ಕವಿತೆ ಎಂದರೆ….
ಭಾವದಲೆಗಳ ರಿಂಗಣ
ಭಾವಾವೇಷದ ಅಂಕಣ
ಧೀರರೊಳಗಿನ ಪರಾಕಾಷ್ಟೆ
ವಿಜಯದೊಳಗಿನ ನಿಷ್ಟೆ
ಸಡಗರ ಸಂಭ್ರಮದ ಹಾರ..!
ಉತ್ಕರ್ಷದ ಉದಂತ
ಉದ್ಘೋಷದ ಆರ್ದ್ರತೆ
ಚಿಮ್ಮುವ ಕಾರಂಜಿ
ಹೊಮ್ಮುವ ರಾಗಗಳ ಸಾರ..!
ಕವಿತೆ ಎಂದರೆ….
ನನ್ನೆದೆಯೊಳಗೆ
ಗುನುಗುಟ್ಟುವ ಅದ್ಭುತ ರಾಗಲಹರಿ
ಶ್ಲಾಘ್ಯ ಶ್ಲೇಷಗಳ
ಶ್ರೇಷ್ಟತೆಯ ಭಾವ
ಸ್ಫುರಿಸುವಿಕೆಯ ಝರಿ
ಸ್ಫುಲಿಂಗದ ಗರಿ
ಸ್ಮಿತ ಸ್ಮೃತಿಯೊಳಗಿನ
ಸೌಷ್ಠವದ ಪ್ರಸ್ತಾವ….
ತುಂಬಾ ಸೊಗಸಾದ ಕವಿತೆ
ಕವಿತೆಯೆಂದರೆ ಅಭಿಜ್ಞಾ….. ಅಭಿಜ್ಞಾ ಎಂದರೆ ಕವಿತೆ.
ಅದ್ಭುತ ಪದಪುಂಜಗಳ ಭಂಡಾರ