ಕಾವ್ಯ ಸಂಗಾತಿ
ಮೌನಶಿಲಾನಾದ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ಮೌನದಿ ಶಿಲೆಯಲಿ ಕಲೆಯರಳಲು
ಶಿಲ್ಪಿಯ ಲಯ ತಾಳ ಬೆರಳಲಿರಲು
ಭಾವತರಂಗಗಳು ಮನದಿ
ಮೂಡಿರಲು
ಸ್ಪಂದಿಸಿದ ಶಿಲೆ ಛನ್ ಛನ್
ನಾದಗೈದಿತು
ಮೂಢ ಕಲ್ಲು ಮೈಚೆಲ್ಲಿ ಮಲಗಿತು
ಅವನ ಜತೆ ನಗುತ ಮಾತಾಡಿತು
ಶಿಲ್ಪಿ ನೋವಾ? ಎಂದಾಗ ನಕ್ಕಿತು
ಅವನ ಕಠಿಣ ಸ್ಪರ್ಶಕೆ ಸ್ಪಂದಿಸಿತು
ಸೃಷ್ಟಿಯನು ಸೃಷ್ಟಿಸಿದ ಭಗವಂತ
ಅವನನ್ನೇ ನಿರ್ಮಿಸಿದ ಕಲಾಕಾರ
ಬೆರಗಾದ ಭಗವಂತ ದಿವ್ಯದೃಷ್ಟಿಯನಿತ್ತ
ಶಿಲೆಯೊಳಡಗಿದ ಚೈತನ್ಯ ಉಕ್ಕಿ ಹರಿಯಿತು
ದೇವಿ ದೇವತೆ ಮಾನವ ದಾನವ
ಪ್ರಾಣಿ ಪಶು ಪಕ್ಷಿ ಪರಿಸರ
ಪ್ರತಿ ಸೃಷ್ಟಿಯನೇ ಸೃಷ್ಟಿಸಿದ
ಪಾಷಾಣಕೆ ಪ್ರಾಣವನಿತ್ತ ಶಿಲ್ಪಕಾರ
ಸೂರ್ಯದೇವಾಲಯದ ಕೋನಾರ್ಕ
ಕಲ್ಲರಳಿ ಹೂವಾಗಿ ಹೆಸರಾಂತ ಹಂಪಿ
ಜೈನಬಸದಿ ಪಟ್ಟದಕಲ್ಲು ಬಾದಾಮಿ
ಸುವರ್ಣ ಮಂದಿರಗಳು ಪವಿತ್ರವಾದವು
ಕೇದಾರ ಬದರಿ ಸೋಮನಾಥ
ಹಿಮವತ್ಪರ್ವತಗಳಲಿ ಚಳಿ ಮಳೆ ಗಾಳಿಯಲಿ ಧ್ಯಾನಸ್ಥ
ಯೋಗಿಯಂತೆ
ಶಿಲ್ಪಕಾರ ನೀನೇ ನಿಜ ಕರ್ಮಯೋಗಿ
ಏಕಶಿಲೆ ಸಾಲಿಗ್ರಾಮದ ಬಾಲಾಜಿಯನು
ಕುಬೇರನನ್ನಾಗಿ ಕೋಟಿ ಕೋಟಿ ಗಳಿಸುವಂತೆ ಮಾಡಿ
ಅನಾಮಧೇಯನಾಗಿ ಶಿಲ್ಪಕಾರ
ದೇವನಂತೆ ನೀನೂ ಮರೆಯಾದೆ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ
ವೈಷ್ಣೊದೇವಿಯಿಂದ ಮಧುರೆ ಮೀನಾಕ್ಷಿ
ಕಂಚಿ ಕಾಮಾಕ್ಷಿ ವಿಶಾಲಾಕ್ಷಿ ಶಾರದೆ
ಸಿಲುಕಿಹರೆಲ್ಲ ನಿನ್ನ ಕಲೆಯ ಬಲೆಯಲ್ಲಿ
ಶಿಲೆಗಳಲ್ಲಡಗಿದ ನಿನ್ನ ಮೌನ ನಾದ
ಪಾಷಾಣದಲಿಯ ಪ್ರಜ್ಞೆ
ಝೇಂಕರಿಸಿ
ಓ೦ಕಾರತರಂಗ ಬ್ರಹ್ಮನಾದಗೈದು
ಬ್ರಹ್ಮಾಂಡವನೇ ಬೆರಗುಗೊಳಿಸಿದೆ