ಕವಿ-ಕಾವ್ಯ ಪರಿಚಚಯ
ತಮ್ಮ ಪಾಡಿಗೆ ತಾವು ಕಾವ್ಯಕೃಷಿ ಮಾಡಿಕೊಂಡಿರುವ ವಿದ್ಯಾಶ್ರೀ ಅಡೂರ್ ಸಂಗಾತಿಯಈ ತಿಂಗಳ ಕವಿ
ಕವಿ ಪರಿಚಯ
ರೆಕ್ಕೆ ಬಿಚ್ಚಿ ಸ್ವಚ್ಚಂದವಾಗಿ ಆಗಸದಲ್ಲಿ ಹಾರಾಡುವ ಹಕ್ಕಿಯಂತಹ ಮನಸ್ಥಿತಿಯುಳ್ಳ ವಿದ್ಯಾಶ್ರೀ ಅಡೂರ್ ಅವರು ಮೂಲತಹ ಬಂಟ್ವಾಳದವರಾದರೂ ಮದುವೆಯಾಗಿ ಬೆಳ್ತಂಗಡಿಯ ಮುಂಡಾಜೆಯಲ್ಲಿ ವಾಸವಾಗಿದ್ದಾರೆ. ಬಿ. ಎ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದ ಇವರು ಹದಿನೆಂಟು ವರ್ಷಗಳ ಬಳಿಕ.. ಈಗ ಕನ್ನಡದಲ್ಲಿ ಎಂ. ಎ ಮಾಡಲು ಹೊರಟಿದ್ದಾರೆ. ಹೈ ಸ್ಕೂಲು ದಿನಗಳಲ್ಲಿಯೇ ಕವನ ರಚನೆಯ ಹವ್ಯಾಸ ಇವರಿಗಂಟಿಕೊಂಡಿತಾದರೂ.. ಅಂತಹ ಬೆಳವಣಿಗೆಯೇನೂ ಇರಲಿಲ್ಲ. ನಂತರ ಪದವಿ ತರಗತಿಗಳಲ್ಲಿ ಚುರುಕು ಪಡೆದ ಕವಿತೆ ರಚನೆಯ ಗೀಳು, ಅವರಿಗೆ ಕಾಲೇಜು ಮಟ್ಟದಲ್ಲಿ ಅನೇಕ ಪ್ರಶಸ್ತಿ, ಬಹುಮಾನಗಳನ್ನು ತಂದು ಕೊಟ್ಟಿತು. ಪದವಿ ಮುಗಿಯುತ್ತಲೇ ವಿವಾಹ ಬಂಧನಕ್ಕೆ ಒಳಗಾದ ಇವರು ಮೂವರು ಹೆಣ್ಣು ಮಕ್ಕಳ ಹೆಮ್ಮೆಯ ಅಮ್ಮನಾಗಿದ್ದಾರೆ. ತೀರ ಇತ್ತೀಚಿಗಿನ ದಿನಗಳ ವರೆಗೂ ಪೂರ್ಣಪ್ರಮಾಣದ ಗೃಹಿಣಿಯಾಗಿ ಉಳಿದ ವಿದ್ಯಾಶ್ರೀ ಅವರು….ಪುನಃ ತಮ್ಮ ಕವಿತೆ ರಚನೆಯ ಆಸಕ್ತಿಯತ್ತ ವಾಲಿದ್ದಾರೆ. 72 ಕವಿತೆಗಳುಳ್ಳ ಸ್ವಯಂ ದೀಪ ಎಂಬ ತಮ್ಮ ಮೊದಲ ಕವನ ಸಂಕಲನಕ್ಕೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಧಿಕಾರವು ಕೊಡಮಾಡುವ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನ ದ ಮನ್ನಣೆಗೆ ಪಾತ್ರವಾಗಿದೆ. ಅವರ 65 ಕವನಗಳುಳ್ಳ ಎರಡನೇ ಕವನ ಸಂಕಲನ ಭಾವಬೇತಾಳ 2022ರಲ್ಲಿ ಉಜಿರೆಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ 3ನೇ ರಾಜ್ಯ ಅಧಿವೇಶನದಲ್ಲಿ ಲೋಕಾರ್ಪಣೆಗೊಂಡಿತು.
ನಿನಾದ ಸಾಹಿತ್ಯ ಸಂಚಯ, ಭಟ್ಕಳ ಇದರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಆನ್ಲೈನ್ ಕವನ ವಾಚನ ಸ್ಪರ್ಧೆ ಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನದೊಂದಿಗೆ “ನಿನಾದ ಕಾವ್ಯ ಸಿರಿ “ಎಂಬ ಪ್ರಶಸ್ತಿ ಯನ್ನು ಮುಡಿಗೇರಿಸಿ ಕೊಂಡಿದ್ದಾರೆ ವಾಹಿನಿ ಕಲಾ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ರಚನೆ ಸ್ಪರ್ಧೆ( 2020 )ಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಸಿರಿಗನ್ನಡ ವೇದಿಕೆ ದಸರಾ ಪ್ರಯುಕ್ತ ಆಯೋಜಿಸಿದ್ದ ಆನ್ಲೈನ್ ಕವನ ವಾಚನ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಯುವ ವಾಗ್ಮಿ ಬಳಗ ಆಯೋಜಿಸಿದ ಕೊರೊನ ಜಾಗೃತಿಯ ಕವಿಗೋಷ್ಠಿ ಯಲ್ಲಿ ಭಾಗವಹಿಸಿ 6 ನೇ ಸ್ಥಾನ ಪಡೆದಿರುತ್ತಾರೆ .(ಆನ್ಲೈನ್)
ಅ ಭಾ ಸ ಪ(ಅಖಿಲ ಭಾರತೀಯ ಸಾಹಿತ್ಯ ಪರಿಷತ್ )ಆಯೋಜಸಿದ್ದ ಹೃದಯದಲ್ಲಿ ರಾಮಮಂದಿರ ಅಯೋಧ್ಯೆ ಯಲ್ಲಿ ರಾಮ ಚಂದಿರ ಎಂಬ ವಿಷಯದ ಕವನ ರಚನೆ ಮತ್ತು ವಾಚನ ಸ್ಪರ್ಧೆ ಯಲ್ಲಿ, ಮಂಗಳೂರು ವಲಯಕ್ಕೆ 4 ನೇ ಸ್ಥಾನ ಪಡೆದಿರುತ್ತಾರೆ ಇತ್ತೀಚಿಗೆ ಅಂದರೆ 2022ರಲ್ಲಿ ಎಕ್ಸೆಲ್ ಕಾಲೇಜು ಆಯೋಜಿಸಿದ್ದ ಅಕ್ಷರಮೇಳದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಯಲ್ಲಿ ಭಾಗವಹಿಸುವ ಇವರಿಗೆ ಒಲಿದು ಬಂದಿತ್ತು.ಬೆಳಗಾವಿಯ ಕಸ್ತೂರಿ ಸಿರಿಕನ್ನಡ ವೇದಿಕೆ, (ರಿ )ಇವರು ಕೊಡಮಾಡುವ 2021ರ ಸಾಲಿನ ಕವಿವಿಭೂಷಣ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಇವಿಷ್ಟೇ ಅಲ್ಲದೆ…. ಅನೇಕ ಸಾಹಿತ್ಯ ಸಂಘಗಳು ನಡೆಸುವ ಸ್ಪರ್ಧೆ ಗಳಲ್ಲಿ ಮುಖತಃ ಮತ್ತು ಆನ್ಲೈನ್ ಮೂಲಕ ಭಾಗವಹಿಸಿ ಅಪಾರ ಜನಮನ್ನಣೆಯನ್ನೂ, ಪ್ರಶಸ್ತಿ ಪತ್ರಗಳನ್ನೂ, ಪುಸ್ತಕ ಬಹುಮಾನಗಳನ್ನೂ ಪಡೆದಿರುತ್ತಾರೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಮುಂಡಾಜೆ ಘಟಕದ ಸಂಚಾಲಕಿಯಾಗಿದ್ದ ಇವರು ಇತ್ತೀಚಿಗೆ ಬೆಳ್ತಂಗಡಿ ತಾಲೂಕು ಸಮಿತಿಯಾ ಮಹಿಳಾ ಪ್ರಾಕಾರದ ಪ್ರಮುಖ್ ಆಗಿ ನೇಮಕಗೊಂಡಿದ್ದಾರೆ.ಕೂಟ ಮಹಾಜಗತ್ತು ಬೆಳ್ತಂಗಡಿ ಇದರ ಮಹಿಳಾ ವೇದಿಕೆಯ ಸಕ್ರಿಯ ಸದಸ್ಯ ರಾಗಿದ್ದಾರೆ
ಸದಾ ಚಿಲುಮೆಯ ಬುಗ್ಗೆಯಂತೆ ನಗುನಗುತ್ತಾ ಇರುವ ಇವರು ಜನಸಂಘಟನೆಯಲ್ಲಿ, ನಾಯಕತ್ವದ ನಿರ್ವಹಣೆಯಲ್ಲಿ ಎತ್ತಿದ ಕೈ.ವಿದ್ಯಾಶ್ರೀ ಅವರ ಅನೇಕ ಕಥೆಗಳು, ಕವನಗಳು, ಲೇಖನಗಳು ಅನೇಕ ಸ್ಥಳೀಯ ಪತ್ರಿಕೆ ಗಳಲ್ಲಿ…. ನಾಡಿನ ಅನೇಕ ಇ -ಪತ್ರಿಕೆ ಗಳಲ್ಲಿ ಪ್ರಕಟಣೆಯನ್ನು ಕಂಡಿವೆ
ಇವರ ಬರಹಗಳನ್ನು ನಾಡಿನ ಅನೇಕ ಖ್ಯಾತನಾಮರು ಮೆಚ್ಚಿ ಹಿತನುಡಿಗಳನ್ನು ದಾಖಲಿಸಿದ್ದಾರೆ.ಇತ್ತೀಚೆಗೆ ಅನೇಕ ಆನ್ಲೈನ್ ಗೋಷ್ಠಿಗಳಲ್ಲಿ, ವಿಮರ್ಶೆಗಳಲ್ಲಿ, ಭಾಗವಹಿಸಿ ತಮ್ಮ ಅಸ್ಥಿತ್ವದ ಛಾಪನ್ನು ಮೂಡಿಸಿದ್ದಾರೆ.
ಕನಸಿನ ಮಹಲನ್ನು ಏರುವ ಮಹದಾಸೆಯನ್ನು ಹೊಂದಿರುವ ವಿದ್ಯಾಶ್ರೀ ಅವರು ಇನ್ನೂ ಆರಂಭದ ಮೆಟ್ಟಿಲುಗಳನ್ನು ಏರಿದ್ದಾರಷ್ಟೇ…ಸಾಗುವ ದಾರಿ ಇನ್ನೂ ಬಹಳಷ್ಟಿದೆ. ಅದಕ್ಕಾಗಿ ಅವರಿಗೆ ಆ ದೇವರ ಆಶೀರ್ವಾದ ಮತ್ತು ಅನೇಕ ಸಹೃದಯಿ ಹಿರಿಕಿರಿಯರ ಆಶೀರ್ವಾದ ಮತ್ತು ಹಾರೈಕೆಯ ಅಗತ್ಯವಿದೆ.
——————————————————————-
ವಿದ್ಯಾಶ್ರೀ ಅಡೂರ್ ವರಕವಿತೆಗಳು
ಕವನವಾಗು ಬಾ ಭಾವವೇ
ನಗುವ ಮುಖದೊಳಗೊಂದು ಅಳುವ ಮಗುವಿನ ಛಾಯೆ
ಹಗಲರಳಿ ಬೀಗಿರಲು ಒಂಟಿ ರಾತ್ರಿಯ ಮಾಯೆ
ಮೂಲೆಯೊಳಡಗಿದ ಕಸದಂತೆ ನಲುಗದಿರು ಓ ಮನವೇ
ಮಾತು ಮೌನವ ಮೀರಿ ಕವನವಾಗು ಬಾ ಭಾವವೇ..
ಜಗದಗಲ ಅನವರತ ಕನಸುಗಳು ಓಡುತಿವೆ
ಹೆಗಲೊಳೆತ್ತಿದ ಭಾರ ಇಡಲೆಲ್ಲಿ ಜಾಗವಿದೆ?
ಮೆದುವೊಮ್ಮೆ ಹದವೊಮ್ಮೆ ಗಡಸುತನ ನಡುನಡುವೆ
ಬಿಗುಮಾನ ತೊರೆಯುತಲಿ ಕವನವಾಗು ಬಾ ಭಾವವೇ…
ಹಿಂದು ಮುಂದಿನ ತವಕ,ಇಂದು ನಾಳೆಯ ಪುಳಕ
ಬಂಧಗಳ ತಕಧಿಮಿತ, ಗಂಧಗಳೆಡೆಗಿನ ಸೆಳೆತ
ಸಂಧಿಯಲಿ ಕಳೆದ್ಹೋದ ಅತ್ಯಾಪ್ತ ಒಲವೇ
ಸಂಭವಿಸು ಮತ್ತೊಮ್ಮೆ ಕವನವಾಗು ಬಾ ಭಾವವೇ…
***
ಆಕೆ… ಅಂತರ್ಮುಖಿ
ಎಷ್ಟು ಒರೆದರೂ ಏನು ಬರೆದರೂ
ಭಾವದ ಕಟ್ಟೆ ಒಡೆಯುತ್ತಲೇ ಇಲ್ಲ
ಕನಸ ಕೂಸದು ನನಸ ಬಯಸದೆ
ಭರವಸೆಯೊಂದನು ಹಡೆಯುತ್ತಲೇ ಇಲ್ಲ
ಭಾರವಾದ ಮನಸ ಭಾವವು
ಹಗುರ ಹನಿಯನು ಚೂ ಬಿಟ್ಟಿತು ಕಣ್ಣಂಚಲಿ
ಎದೆಯೊಳಪ್ಪಿದ ಮೌನ ರಾಗವು ತಾಳಮೇಳವಿರದೆ ಗುಡುಗತೊಡಗಿತು ಗುಂಡಿಗೆಯಲಿ
ಚಂಡಮಾರುತದ ತಾoಡವ
ಪುಟ್ಟ ಹೃದಯದ ರಾಜ್ಯದಿ
ಸದ್ದೇ ಇರದ ಮೌನ ಸಾಗರ
ಎದುರು ಕಾಣುವ ವದನದಿ
ಸೊಲ್ಲನೊಲ್ಲದೆ ಸಲ್ಲುವಾಕೆ ಬಗೆಗೆ
ಎಲ್ಲ ಬಲ್ಲವರದು ಗುಲ್ಲೋ ಗುಲ್ಲು
ಎಲ್ಲೆ ಮೀರದ ಹುಲ್ಲೆಯವಳು
ನಾಳಿನ ಹುಲುಸಿಗಾಗೇ ಬೆಳೆದ ಹುಲ್ಲು….
***
ಮನದಹಕ್ಕಿ
ಕನಸಿನೂರು ಮುಗಿಲ ಮೇಲೆ ಇರುವ ಕಲ್ಪನೆ
ನೆಲವ ಬಿಟ್ಟು ಹಾರುವುದಕೆ ಕ್ಷಣಗಳ ಗಣನೆ
ನನಸು ಬೊಗಸೆಯೊಳಗೆ ಹಿಡಿಯದಂತ ಘರ್ಷಣೆ
ಯಾರ ಕರ್ಮದಿಂದ ಯಾರಿಗಾಗೋ ಉರವಣೆ
ಹಾರುವುದಕೆ ರೆಕ್ಕೆಯಿರದ ಹಕ್ಕಿ ಮನಗಳು
ಸೂರುಸಿಗದೆ ಅಂಡಲೆಯುವ ಅಲೆಮಾರಿಗಳು
ಎಲ್ಲಾ ಇದ್ದೂ ಏನೂ ಇರದ ಭಾವ ಕಾಡಲು
ಬಿಡಲು ಬರದೆ ಹಿಡಿಯಗೊಡದೆ ಕುಣಿಯುವ ಅಮಲು
ತಂಪುಗಾಳಿ ಬಿರುಸು ಪಡೆದು ಸುಳಿಯನೆಬ್ಬಿಸಿ
ಸೊಂಪುಗಳನು ಬುಡಸಮೇತ ಇಲ್ಲವಾಗಿಸಿ
ಸಾರವಿರದ ಸಪ್ಪೆಲೋಕ ಸ್ವಾದ ಮೆರೆದಿದೆ
ಮೇರುಗಳು ದಾರಿಯಿರದೆ ಮೂಲೆ ಸೇರಿದೆ
ಕಲಿಯಬೇಕು ನೆಲವಬಿಡದೆ ಕನಸ ಹಡೆಯಲು
ಒಡಲಸಾರ ಬಸಿದು ಅದನು ನನಸು ಮಾಡಲು
ಬೇರನಿಳಿಸಿ ಭುವಿಯ ಮೇಲೆ ಗಟ್ಟಿನಿಲ್ಲಲು
ಪಳಗಬೇಕು ಮನದ ಹಕ್ಕಿ ಜಗವ ಗೆಲ್ಲಲು
***
ಗೀಳಿನ ಗೋಳು
ಯುದ್ಧ ಮನದೊಳಗೊಂದು
ಸಿದ್ಧಗೊಳಿಸಿಹುದಲ್ಲ..
ಬುದ್ಧನಾಗುವ ಬಯಕೆ ಬಾರಿ ಬಾರಿ..
ಗೆದ್ದು ಬೀಗುವ ತವಕ
ಸುದ್ದಿಯಾಗುವ ಪುಳಕ
ಬಿದ್ದರೂ ಸಿಗದಲ್ಲ ಬುದ್ಧಿ ದಾರಿ
ಗಾಳಿಯಿರದಾ ಗಗನ
ಗೀಳು ಹಕ್ಕಿಗೆ ಉರುಳೇ
ತೋಳು ಚಾಚಿಸಿದಷ್ಟೂ ಬೆಂಕಿಯುಗುಳು
ಚೇಳಿನಂತಹ ಕುಟುಕು
ತೋಳದಂತಹ ಮೊಟಕು
ಹಾಳು ಹೊದ್ದಿಹುದಲ್ಲ ಮನದ ಮುಗುಳು
ತೇವವಿರದ ನೆಲದಿ
ಹೂವು ಅರಳುವುದೆಂತು
ಸೇವೆ ಮುಗಿಯದ ಹೊರತು ಪಯಣವೆತ್ತ??
ಗೋವ ಮುಖದೊಳು ಹುದುಗಿ
ನೋವ ಕೊಡುವರ ನಡುವೆ
ಭಾವದಂಗಡಿ ಕರಗಿ ಬರಿದು ಹುತ್ತ..
ಫೋಟೊ ಆಲ್ಬಂ
ತಿಂಗಳ ಕವಿಗೆ ಅಭಿನಂದನೆಗಳು…..
ಅಭಿನಂದನೆಗಳು ವಿದ್ಯಾಶ್ರೀ ಮೇಡಮ್