ಕಾವ್ಯ ಸಂಗಾತಿ
ನನ್ನ ಕವಿತೆ
ವಿಜಯಶ್ರೀ ಎಂ. ಹಾಲಾಡಿ
ಬಳಿ ಬಂದು ಕೈ ಹಿಡಿದೆಳೆದರೂ
‘ತಡೀ ಬಂದೆ ಬಂದೆ’ ಎನ್ನುತ್ತಲೇ
ಕಾಲಹರಣ ಮಾಡಿಬಿಟ್ಟೆ!
ಮೊದಲನೆಯ ಪ್ಯಾರಾ
ಕೊನೆಯದೆರಡು ಸಾಲು
ಹಿತವಾಗಿ ಹೃದಯ ನೇವರಿಸುತ್ತಿತ್ತು
ನಾನು ಪಲಾವಿಗೆ ತರಕಾರಿ ಕತ್ತರಿಸುತ್ತ
ಮಸಾಲೆ ಕಡೆಯುತ್ತ
ಕುಕ್ಕರಿಗೆ ಹಾಕಿ ಅದುಮಿಟ್ಟು ಬೇಯಿಸುತ್ತ
ಒಗ್ಗರಣೆ ಸಿಡಿಸಿ ಘಾಟು ಏಳಿಸುತ್ತ
ಕೆಮ್ಮುತ್ತ ಕಳೆದೇ ಹೋದೆ
.
ಅಡುಗೆಮನೆ ಮುಗಿದೊಡನೆ
ಇನ್ಯಾವುದೋ ಒಣ ತರಲೆ
ತಾಪತ್ರಯಗಳು ಅಂಟಿಕೊಂಡವು
ಹೌದು
ಮನೆಮಂದಿ ಉಂಡು ತೇಗಿದರು
ನನ್ನ ನಾಲಗೆಯೂ ರುಚಿ ಚಪ್ಪರಿಸಿತು
ಮುಸುರೆ ಪಾತ್ರೆಗಳ ಗಡಿಬಿಡಿಯಲ್ಲಿ
ಸಂಜೆಯ ಕಾಫಿ
ರಾತ್ರಿಯಡುಗೆಯ ಧಾವಂತದಲ್ಲಿ
ಮೈ ಮರೆತಿದ್ದಾಗ
ಕಾದು ಬೆಂಡಾದ
ನನ್ನ ಕವಿತೆ ನಿರ್ಗಮಿಸಿತು!
ವಿಶಾಲ ಸೌರಮಂಡಲದಲ್ಲಿ
ನಾನೀ ಕ್ಷಣ ಒಂಟಿ!
———————————
ವಿಜಯಶ್ರೀ ಎಂ. ಹಾಲಾಡಿ
ವಾಹ್ ವಾಹ್…….ನೈಜ ಚೆಲುವು.. ಸತ್ಯ ಶಿವಂ ಸುಂದರಂ…. ತರಹ