ಕಾವ್ಯ ಸಂಗಾತಿ
ಅಳಿದು ಹೋಗದಷ್ಟಾದರೂ
ಅರುಣಾ ಶ್ರೀನಿವಾಸ
ಒಲೆಯ ಉರಿಯೊಳಗೆ
ಅದೆಷ್ಟು ಕಾಲ
ನಿನ್ನೆಲ್ಲಾ ಆಸೆಗಳನ್ನು ಸುಟ್ಟು
ಕನಸುಗಳಿಲ್ಲದೆಯೇ
ಬದುಕಿದ್ದೆ ನೀನು…?
ಅಚ್ಚರಿಯಾಗುತ್ತದೆ ನೋಡು..
ಸುಟ್ಟು ಬೂದಿಯಾಗಿದ್ದ
ಆ ನಿನ್ನ ಕನಸುಗಳನ್ನು
ಮತ್ತೆ ಅದು ಹೇಗೆ ಹೆಕ್ಕಿದೆಯೋ…!
ಭುವಿ ಬಾನುಗಳನೆಲ್ಲಾ
ಹೇಗೆ ಜಾಲಾಡಿದೆಯೋ…!
ನಾಲ್ಕು ಗೋಡೆಯ ಒಳಗೆ
ಹೆಣ್ಣು ಜೀವಗಳ ಬಿಕ್ಕು..
ಹೊರಗೆ ಹಾರಿದರೆ ಕಾಡುವ
ಓರೆ ನೋಟಗಳ ಕುಮ್ಮಕ್ಕು…
ಅಡಿಗಡಿಗೆ ಕಾಡೀತೇ
ಅತ್ಯಾಚಾರದ ತೊಡಕು…?
ಎಷ್ಟೊಂದು ನೋವುಗಳು
ಆ ನಿನ್ನ ಬೆಳೆದ ಮನದ
ಚಿಗುರುಗಳನ್ನು ಮತ್ತೆ ಮತ್ತೆ ಕಡಿದು
ಅಮಾನವೀಯವಾಗಿ
ಹೊಸಕಿ ಹಾಕಿಲ್ಲ ನೋಡು…?
ಆದರೂ…
ನಿನ್ನಲ್ಲಿ ಕಡಿದಷ್ಟೂ ಕೊನರುವ
ರೆಕ್ಕೆಗಳಿವೆ…
ಹಾರಲು ಎದೆಯಾಳದ
ಬತ್ತದೊರತೆಯಿದೆ…
ವಿಶಾಲ ಬಾನಲ್ಲಿ ಸೆಳೆಯುವ
ಅನಂತ ಚಿಕ್ಕೆಗಳಿವೆ…
ತೊಟ್ಟಿಲಲ್ಲಿ ಮಲಗಿರುವ
ಹೆಣ್ಣು ಮಗುವೊಂದು ನಿದ್ದೆಯಲ್ಲೇ
ಕನಸುಗಳ ಅಬ್ಬರಕ್ಕೆ
ಅಬ್ಬಾ… ಹೇಗೆ ಕಿಲಕಿಲನೆ
ನಗುತ್ತದೆ ನೋಡು…?
ಆದರೂ..
ನಿನ್ನ ಮುಂದಿರುವ ಜಗತ್ತು
ಇನ್ನೂ ಬದಲಾಗ ಬೇಕೆನಿಸುತ್ತದೆ…
ನಿನ್ನೆದೆಯಲ್ಲಿ ಅರಳಿದ
ಹೂವಿನ ಕಂಪು
ಅಳಿದು ಹೋಗದಷ್ಟಾದರೂ….!
ಒಳ್ಳೆಯ ಕವಿತೆ