ಕಾವ್ಯ ಸಂಗಾತಿ
ನೋವು ಮತ್ತು ದ್ರವ
ಸಂತೆಬೆನ್ನೂರು ಫೈಜ್ನಟ್ರಾಜ್
ಬೋತಲಿಯಿಂದ ಒಂಟಿ ಕಾಲಿನ ಬಟ್ಟಲಿಗೆ
ಜಿಗಿದ ದ್ರವ
ಗಂಟಲ ಗುಹೆಗುಂಟ ಬಿದ್ದದ್ದು ನೋವಿನ ಮೇಲೇ!
ನಂದಿದ್ದದ್ದೇ ಅಂತ ನಿರಾಳವಾಗಿ
ಮಲಗಿದ್ದ ನೋವಿನ ಮೇಲೆ ಸುಡ್ ಸುಡೋ
ಹನಿಗಳು ಬಿದ್ದಕೂಡಲೇ ಎದ್ದು ಚಕ್ಕಂಬಕ್ಕಳ
ಹಾಕಿ ಕೂತುಬಿಟ್ಟಿತು.
ದ್ರವದ ಜೊತೆ ಜೊತೆಗೆ ಕ್ಲೋಸಪ್ ಪೇಸ್ಟಿನಂತಹ
ಉಪ್ಪನಕಾಯಿಗೆ ನೋವು
ನಲುಗಿ ಹೋಯಿತು ಒಮ್ಮೆಲೆ ” ತುಟಿ ಮೇಲೆ ಬಂದಂಥ ಮಾತೊಂದೆ ಒಂದು…. ” ಹಾಡು ಗೊತ್ತಿಲ್ಲದಂತೆ
ನೋವಿನ ನಾಲಗೆ ಮೇಲೆ ರಾರಾಜಿಸತೊಡಗಿತು!
ಪಕ್ಕದಲ್ಲೇ ನೆಗ್ಗಿ ಹೋದ ಎದೆ,
ಸನಿಹವೇ ಅದರುತ್ತಿರುವ ಹೃದಯ
ಅದರೊಳಗೆ ಎಂದೋ ಹಾಡಿ ಬಿಟ್ಟ ಹಳೆಯ ಕವಿತೆಗಳ ಸಮಾಧಿ
ಚೂರು ನಿಟ್ಟುಸಿರು….ಎಲ್ಲವೂ ನೋವ
ನರ್ತನಕ್ಕೆ ಸಾಥ್ ನೀಡಲೆದ್ದವು!
ಒಂದೊಂದು ಗುಟುಕು ಒಳ ಬಂದಂತೆ
ನೋವು ಮಧುರ ಮುಲುಕಿನೊಡನೆ ಹೃದಯದ ಹೆಗಲಿಗೆ ಕೈ
ಹಾಕಿ ಬಂದ ದ್ರವವ ಬೈಟು ಮಾಡಿ ಚಿಯರಪ್ ಹೇಳುತ್ತಿದೆ!
ಬಿಕ್ಕಳಿಸ ಹೊರಟ ಹೃದಯಕ್ಕೆ
ಹಗೂರಾಗಿ ಆಲಂಗಿಸಿ
ನಗಿಸಲೆತ್ನಿಸಿ ಸೋತಿತು ಮನಸು
ಎದೆಗುಂದದ ನೋವು ಮರೆತ ಅವಳ ಸಾಲು ಸಾಲು ಹಾಡುಗಳ
ಎದುರೆದುರೇ ಸುರಿಯುತಿದೆ!
ಗಂಟಲ ಗುಹೆ ಬಂದಾಯಿತು
ದ್ರವವೆಲ್ಲಾ ನೋವಿಗೂ ಮತ್ತು ಹೃದಯಕ್ಕೂ
ಸಾಲದಾಗಿ
ಮತ್ತೊಂದಕೆ ಮನವೆಳಸಿ ಕಾತರ;
ಎಂದೋ ಕೈ ಬೀಸಿ ಹೋದ ಅವಳ
ನೆನಪೇ ನೋವು
ಅರ್ಧಂಬರ್ಧ ಕವಿತೆಗಳೇ ನೆನಪು
ದ್ರವ ಬಂದಾಗೆಲ್ಲಾ ಅವಳು ಕಣ್ಮುಂದೆ;
ಉಳಿದ ಸಮಯ ನೆಗ್ಗಿದ ಎದೆಯಲ್ಲಿ
ಮುರಿದ ಹೃದಯದಲ್ಲಿ ಬಂಧಿ!
ನೋವೊಂದೇ…..ಅನವರತ ಜತೆ
ಎಲ್ಲರಿಗೂ!
ತೇಲಲೀಯದು ಗುಂಡು.. ..ಮುಳುಗಲೀಯದು ಬೆಂಡು
ಹೊತ್ತ ಹೊರೆಯ ಎದೆಗಿಳಸದೇ ಹೊತ್ತುದುದರ ಫಲ
ಮಳೆ,ಹೊಳೆ, ನದಿ, ಕೆರೆ ನೀರೆಲ್ಲ
ಶರಧಿಲೀನ ಒಂದೆAಬ ಸ್ವ ಸಮಾಧಾನ ಚಿತ್ತಾಲಪ ತಾನ!
ಕಡಲನೀರು ಋಷಿಮುನಿಗಳ ತಪ
ನೆಲೆಯ ಆಗಾಸಧೀನ ತಾಣವಲ್ಲ; ಪ್ರಾಣಾಯಾಮದೊಳು ಉಸಿರ ಬಂಧದಿ ಬಂದಿಸಿಡೆ
ನೂರು ಸ್ತರದ ನೀರು
ಒಂದಾಗಿ ಲವಣ, ನಿನ್ನೊಳಗಿನ ಸಾವಿರ ಆಲಿಂಗನಕೆ
ಒAದೆAಬ ಗುಂಡು ತೇಲುವುದಾ ಹೇಳು?
ತೆರೆದ ಎದೆಗಳೆಲ್ಲವೂ ನನ್ನದೆಂದು ಕಣ್ಣ ಬಾಣ ಬಿಟ್ಟ ನೀನು
ಜಗದಗಲ, ಮುಗಿಲಗಲ, ಮಿಗೆಯಗಲವೆಂದ ನಿನ್ನ ಮನವ ಹೊಸ್ತಿಲಾಚೆಯೇ
ಬಿಟ್ಟು ಎದೆ-ಹೊಟ್ಟೆ ಸವರಿ ಒಳ ನಡೆದ ಪರಿಗೆ
ತೇಲುವುದೇ ಗುಂಡು ಹೇಳು?
ಹೊತ್ತ ಹೊರೆಯಿಳಿಸದೇ ಫಥಗಳ ಬದಲಿಸಲಾರೆ ನಾನು ;
ಅದೆಷ್ಟು ಚಿನ್ಮುದ್ರೆ ಹಾಕಿ ಕೂತರೂ ಮನ
ಮನದೊಳಕಿಳಿವ ಮನ ಮಾಡದೇ ಮತ್ತೊಂದಕೆಳಸುತಿದೆ ಶಿವ ಶಿವಾ
ತೇಲಿಸು ಇಲ್ಲಾ ಮುಳುಗಿಸು ಅಷ್ಟೇ!
ಕಟ್ಟಿಕೊಂಡ ಕಿಲುಬು ಕಲಾಯಿಯಾಗದೇ ಒಳಹೊರ
ಫಳಫಳ ಅಂದೀತೇನು? ಅಂಗುಲಿಮಾಲನೆದುರು ಕೂತ ಬುದ್ಧ ನೀನಲ್ಲ ;
ಅಂದಮೇಲೆ ನಿನ್ನ ಹೆಣ ನೀನೇ ಹೊತ್ತು ಸಾಗಿಸು ಮತ್ತು ಒಳ ದನಿಗೆ ತೆರೆ
ಸಕಲವ.. … ನಗಲಿ ಒಮ್ಮೆ ಬುದ್ಧ!
ಕೊನೆಯ ಪಯಣದವರೆಗೂ ಹೊರುತಿರು ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಎಂದೆನುತ ಭಾರವದು ನಿನದೋ, ಜಗದೋ
ಅರಿ…..ಸಾಗು ಅಷ್ಟೇ!
ಸಂತೆಬೆನ್ನೂರು ಫೈಜ್ನಟ್ರಾಜ್
ಭಗ್ನ ಪ್ರೇಮಿಗಳ ರಾಷ್ಟ್ರ ಗೀತೆಯಂತಿದೆ ಈ ನಿಮ್ಮ ಕವಿತೆ ಸಾಲುಗಳು…
ಒಳ್ಳೆ ಕವಿತೆ ಸ್ರ್,