ಹೊಸ ವರ್ಷದ ವಿಶೇಷ-2023

 ಹೊಸ ವರ್ಷ…  ರವಿವಾರ ಬೇರೆ..

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವ್ಹಾ…!! ಹುರ್ರೋ ಕೇಹುವೋ..ಎಂದು ಕೇ ಕೇ ಹಾಕುತ್ತಲೇ,  ಎಲ್ಲಾ ಸ್ನೇಹಿತರು ಸೇರಿಕೊಂಡು, “ವಿಶೇಷವಾಗಿ ಹೊಸ ವರ್ಷವನ್ನು ಆಚರಿಸೋಣ, ಕುಡಿತ, ಮೋಜು, ಮಸ್ತಿ, ನೃತ್ಯ, ಪಬ್ಬು,  ಕ್ಲಬ್ಬ್ ನಲ್ಲಿ ತೇಲುತ್ತಾ, ಹೊಸ ಪ್ರಪಂಚವನ್ನು ನೋಡೋಣ” ಎಂದು ಎಲ್ಲಾ  ಸ್ನೇಹಿತರು ಮಾತನಾಡಿಕೊಳ್ಳುತ್ತಾ, ಇಷ್ಟು ದಿನ ಕಷ್ಟಪಟ್ಟು ಗಳಿಸಿದ್ದ ಹಣವನ್ನು ಯಥೇಚ್ಛವಾಗಿ ಪೋಲು ಮಾಡಿ ಬಿಡುತ್ತಾರೆ.

 ‘ಗುರಿ ಇಲ್ಲದ ಬದುಕು, ಜವಾಬ್ದಾರಿ ಇಲ್ಲದ ಜೀವನ’,  “ಆನೆ ನಡೆದಿದ್ದೇ ದಾರಿ” ಎನ್ನುವ ಅಹಂಕಾರದ ಹುಂಬತನದಲ್ಲಿ ಸಿಕ್ಕ ಯೌವ್ವನದ ಅವಕಾಶವನ್ನು ಯಾವ್ಯಾವುದೋ ಋಣಾತ್ಮಕ ಅಂಶಗಳಿಗೆ ಬಳಸಿಕೊಂಡು ತಮ್ಮ ಬದುಕನ್ನು ಹಾಳು ಮಾಡಿಕೊಂಡು ಬಿಡುತ್ತಾರೆ.  ವಯೋಸಹಜವಾದ ಆಕರ್ಷಣೆಗಳು, ರಂಗು ರಂಗಿನ ತಳುಕು ಬಳುಕಿನ ನಶೆಯ ಅಮಲು ಏರಿಸಿಕೊಂಡು ತೇಲಾಡುವಾಗಲೇ…ಆ  ಕಾಲದಲ್ಲಿಯೇ  ಅವರಿಗೆ ಬಲವಾದ ಪೆಟ್ಟು ಬಿದ್ದರೆ ವ್ಯಕ್ತಿ ಎಚ್ಚರವಾಗುವುದು.

 ಇಂತಹ ಬಲವಾದ ಪೆಟ್ಟು ಬೀಳುವ ಮುನ್ನವೇ ಹಿಂದೆ ಮಾಡಿದ ಎಲ್ಲಾ ಋಣಾತ್ಮಕ ಅಂಶಗಳನ್ನು ಕಿತ್ತೊಗೆದು ವಿದ್ಯಾರ್ಥಿಗಳು, ಯುವಕರು, ಹಿರಿಯರು, ತಮ್ಮದೇ ಆದ ಯೋಜನೆಯನ್ನು ರೂಪಿಸಿಕೊಂಡು, ವ್ಯವಸ್ಥಿತವಾದ ಬದುಕನ್ನು ಕಟ್ಟಿದಾಗ ಮಾತ್ರ ಹೊಸ ವರ್ಷ ಆಚರಣೆಗೆ ಮೆರಗು ಬರಬಲ್ಲದು.

‘ಕಾಲ ಯಾರಿಗೂ ಕಾಯುವುದಿಲ್ಲ, ಕಾಲದೊಂದಿಗೆ ನಾವು ಹೋರಾಟ ಮಾಡಲೇಬೇಕು.  2022 ನೇ ವರ್ಷವು ಅನೇಕ ಹೊಸ ಹೊಸ ಆಶಯಗಳನ್ನು ಈಡೇರಿಸಿದರೂ, ಅನೇಕ ದುಃಖಗಳನ್ನು ಕೊಟ್ಟಿರಬಹುದು.  ದುಃಖಗಳನ್ನು ಮರೆಮಾಚಿ, ಸವಿನೆನಪುಗಳನ್ನು ನೆನಪು ಮಾಡಿಕೊಳ್ಳುತ್ತಾ, ನಮ್ಮ ಬದುಕಿಗೆ ನೂತನ ವರ್ಷ 2023 ನ್ನು  ನಾವು ಸ್ವಾಗತಿಸೋಣ.

 ಬದುಕು ನಾವು ಅಂದುಕೊಂಡಂತೆ ಆಗುವುದಿಲ್ಲ‌. ಎಂದಾದರೂ ಒಳ್ಳೆಯ ಆಲೋಚನೆಗಳು, ಒಳ್ಳೆಯ ಯೋಜನೆಗಳು, ಸಕರಾತ್ಮಕ ಕ್ರಿಯೆಗಳು, ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲವು ಎನ್ನುವ ಮಾತು ಸತ್ಯ. ಇಂತಹ ಧನಾತ್ಮಕ ಚಿಂತನೆಗಳನ್ನು ನಮ್ಮೆದೆಯೊಳಗೆ ಎಲ್ಲರೂ ಬಿತ್ತಿಕೊಳ್ಳುತ್ತಾ.  2022 ರಲ್ಲಿ ಋಣಾತ್ಮಕ ಅಂಶಗಳನ್ನು ಕಳೆದುಕೊಳ್ಳುವ ಕಾಲವಿದು.  ಧನಾತ್ಮಕ ಅಂಶಗಳಿಗೆ ಕಿವಿಗೊಡೋಣ.

ಯೌವ್ವನ ಅತ್ಯಂತ ಕ್ರಿಯಾಶೀಲ ಮತ್ತು ಸ್ಪೂರ್ತಿದಾಯಕ ವಯಸ್ಸು. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಾಧನೆಯನ್ನು ಮಾಡುವ ಕಾಲಘಟ್ಟವೇ ಯೌವ್ವನದ ಕಿರಿಯ ವಯಸ್ಸಿನಲ್ಲಿ ಸಾಧಿಸುವ ಅನೇಕ ವ್ಯಕ್ತಿಗಳನ್ನು ನಾವು ಕಾಣಬಹುದು.

 2023 ರಲ್ಲಿ ನಮ್ಮದೇ ಆದ ಯೋಜನೆಗಳನ್ನು ಕ್ಯಾಲೆಂಡರ್ ಗೆ ಅನುಗುಣವಾಗಿ ಹಾಕಿಕೊಂಡರೆ ಸಮಯ ಸದುಪಯೋಗವಾಗಬಲ್ಲದು. ಸಿಕ್ಕ ಸಮಯವನ್ನು ಅತ್ಯಂತ ಮೌಲ್ಯಯುತವಾಗಿ ಬಳಸಿಕೊಂಡು ಉನ್ನತವಾದ ಗುರಿಯನ್ನು ಮುಟ್ಟಿದಾಗಲೇ ಬದುಕು ಸಾರ್ಥಕವಾಗಬಲ್ಲದು.

ವಿದ್ಯಾರ್ಥಿಗಳಾದವರು ಉನ್ನತವಾದ ಗುರಿಯನ್ನು ಇಟ್ಟುಕೊಂಡಿರಬೇಕು. ಗುರಿ ಇಟ್ಟುಕೊಂಡ ತಕ್ಷಣ ಗುರಿಯನ್ನು ಮುಟ್ಟಲಾಗುವುದಿಲ್ಲ. ಅದಕ್ಕೆ ತಕ್ಕ ಪರಿಶ್ರಮ, ಓದುವ, ಬರೆಯುವ, ಸತತ ಅಭ್ಯಾಸ ಮಾಡುವ, ಹಿಂದಿನ ಪ್ರಶ್ನೋತ್ತರಗಳನ್ನು ಅವಲೋಕಿಸುವ,  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮುನ್ನವೇ ಶೈಕ್ಷಣಿಕ ಮೌಲ್ಯಗಳನ್ನು ಅರ್ಥೈಸಿಕೊಂಡಿರಬೇಕು. ಗುರುಗಳು ಹೇಳಿದ ಪಾಠದ ಮಾರ್ಗದರ್ಶನದ ಮಾತುಗಳು ವಿದ್ಯಾರ್ಥಿಗಳ ಆದರ್ಶದ ಬದುಕಿಗೆ ಪೂರಕವಾಗಬಲ್ಲವು ಎನ್ನುವುದನ್ನು ವಿದ್ಯಾರ್ಥಿಗಳಾದವರು ತಿಳಿಯಬೇಕು.

 ಹೊಸ ವರ್ಷದಲ್ಲಿ ಈ ಅಂಶಗಳನ್ನು ಅರ್ಥೈಸಿಕೊಂಡು, ನೂತನ ವರ್ಷದಲ್ಲಿ ನೂತನ ಯೋಜನೆಯನ್ನು ರೂಪಿಸಿಕೊಂಡು ಅಭ್ಯಾಸದ ಟಿಪ್ಪಣಿಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸಬೇಕು. ಇಂತಹ ಧನಾತ್ಮಕ ಚಿಂತನೆಗಳು ಕೇವಲ ಒಂದು ಸಲವೋ, ಎರಡು ಸಲವೋ ಚಿಂತಿಸಿ ಅದಕ್ಕೆ ಕೇವಲ ಎರಡು ಮೂರು ದಿನ ಪ್ರಯತ್ನಿಸಿ, ನಂತರ ಅದನ್ನು  ನಿರ್ಲಕ್ಷ್ಯ  ಮಾಡಿದರೇ ಯಾವತ್ತಿಗೂ ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಾದವರು ನೂತನ ವರ್ಷಕ್ಕೆ ಅಭ್ಯಾಸದ ದೃಢವಾದ ಹೆಜ್ಜೆಯನ್ನು ಇರಿಸಿದಾಗಲೇ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ದೃಢವಾದ ಹೆಜ್ಜೆಗಳು ಪ್ರೀತಿಯ ವಿದ್ಯಾರ್ಥಿಗಳಿಂದ ಆಗಲಿ ಎಂದು ಹಾರೈಸೋಣ.

ಯುವಕರು ಹೊಸ ವರ್ಷವನ್ನು ಅತ್ಯಂತ ಸಡಗರ ಸಂಭ್ರಮದಿಂದ ಸ್ವಾಗತಿಸುತ್ತಾರೆ ಹೊಸ ವರ್ಷವನ್ನು ಯುವಕರಾದವರು ಸ್ಪೂರ್ತಿಯ ವರ್ಷವೆಂದು ಭಾವಿಸಿಕೊಂಡು ಸಾಧನೆಗೆ ಹೊಸ ಹೆಜ್ಜೆಯನ್ನು ಇಡಬೇಕಾಗಿದೆ ಸೋಲಿನ ಮೇಲೆ ಸೋಲನ್ನು ಅನುಭವಿಸಿ ನಿರಾಶೆಯ ಕತ್ತಲಲ್ಲಿರುವ ಯುವ ಮನಸ್ಸುಗಳು 2022ರ ಸೋಲಿನ ಬರೆಯನ್ನು ಮರೆತು 2023ರ ಸಾಧನೆಯ ವರ್ಷವನ್ನಾಗಿ ಮಾಡಲು ದೃಢವಾದ ಸಂಕಲ್ಪ ಮಾಡಬೇಕು. ಸತತ ಪ್ರಯತ್ನದ ಜೊತೆಗೆ ಓದುವ, ಮನನ ಮಾಡಿಕೊಂಡು ‘ನಾನು ಸಾಧಿಸುವೆ ಎನ್ನುವ ಛಲದೊಂದಿಗೆ ವರ್ಷಕ್ಕೆ ಹೆಜ್ಜೆ ಹಾಕಬೇಕು.

“ಉದ್ಯೋಗಂ ಪುರುಷ ಲಕ್ಷಣಂ” ಎನ್ನುವ ಕಾಲವೊಂದಿತ್ತು. ಇಂದಿನ ಯಾಂತ್ರೀಕೃತ ಬಾಳಿನಲ್ಲಿ ಗಂಡು ದುಡಿದರಷ್ಟೇ ಸಾಲುವುದಿಲ್ಲ. ಹೆಣ್ಣು ಮಕ್ಕಳು ಕೂಡ ದುಡಿಯಬೇಕು. ಅದಕ್ಕಾಗಿ ಅವರು ಕೂಡ ಪರಿಶ್ರಮ ಪಡಬೇಕು. ನೂತನ ವರ್ಷವೂ ಯುವ ಮನಸ್ಸುಗಳ ತುಮಲುಗಳನ್ನು ತೊಳೆದು ಸುಭದ್ರ ಬದುಕನ್ನು ಕಟ್ಟಿಕೊಳ್ಳುವಂತಾಗಲಿ…ಎಂದು ಬಯಸೋಣ.

ಇನ್ನು…

ವಿದ್ಯಾರ್ಥಿಗಳ ಹಾಗೂ ಯುವಕರ ಜೊತೆ ಹಿರಿಯರ ಪಾತ್ರ ಮಹತ್ವವಾದುದು…

ತನ್ನ ಮಗ / ಮಗಳು ಎಲ್ಲಾ ಮಕ್ಕಳಂತೆ ಚೆನ್ನಾಗಿ ಓದಲಿ, ಒಳ್ಳೆಯ ಉದ್ಯೋಗವನ್ನು ಪಡೆದು ಸುಖಕರವಾದ ಜೀವನ ನೆಡಸಲೆಂದು ಬಯಸುವುದು ಪ್ರತಿಯೊಬ್ಬ ಪಾಲಕರ ಆಶಯ. 

ಸದಾ ಪ್ರಯತ್ನ ಪಡುತ್ತಲೇ ಓದುವ ಮಗನನ್ನೋ ಇಲ್ಲವೆ ಮಗಳನ್ನೋ ಪಾಲಕರಾದವರು ಪ್ರೋತ್ಸಾಹಿಸಬೇಕು. ಸಣ್ಣ ಸಣ್ಣ ಸೋಲುಗಳಿಗೆ ಸಾಂತ್ವನ ಹೇಳಬೇಕು. ‘ಇಂದಿನ ಸೋಲು ನಾಳೆಯ ದೊಡ್ಡ ಗೆಲುವು’  ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಬೇಕು. ಅವರ ಶೈಕ್ಷಣಿಕ ಸೌಲಭ್ಯಗಳಿಗೆ ಜೊತೆಯಾಗಿ ನಿಲ್ಲಬೇಕು. ಹೊಸ ವರ್ಷದಲ್ಲಿ ಹೊಸತನದ ತುಡಿಯುವುದಕ್ಕಾಗಿ ಬೆನ್ನು ತಟ್ಟಿ ಹರಸಬೇಕು.

ಇನ್ನು ಯೌವನದ ಅವಧಿಯಲ್ಲಿರುವ ಮಗನನ್ನೋ,  ಮಗಳನ್ನೋ  ಅವರು ಮಾಡುವ ಕಾಯಕಕ್ಕೆ, ಅಭ್ಯಾಸಕ್ಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೋತ್ಸಾಹ ನೀಡಬೇಕು. ಹೊಸ ಹೊಸ ಕನಸುಗಳನ್ನು ನನಸು ಮಾಡಲು ಅವಕಾಶ ನೀಡಬೇಕು.

ಕಳೆದ ಹಳೆಯ ಕಳೆಯ

ಕಿತ್ತು ಎಸೆದುಬಿಡು

ಹೊಳೆವ ಹೊಸ ಕನಸಿನ

ಕಳೆಯನ್ನು ಎಲ್ಲರೆದೆಯೊಳಗೆ ಬಿತ್ತಿಬಿಡು…

ನೂತನ ವರ್ಷದಲ್ಲಿ ದೃಢವಾದ ಸಾಧನೆಯ ಹೆಜ್ಜೆ ಹಾಕಲಿ..ಹೊಸ ವರ್ಷವು ಎಲ್ಲರಿಗೂ ಹರುಷವನು ತರಲಿ…


Leave a Reply

Back To Top