ಹೊಸ ವರ್ಷದ ವಿಶೇಷ-2023
ಹೊಸವರುಷವೆಂಬ ನವಹರುಷ……
ಅಭಿಜ್ಞಾ ಪಿ ಎಮ್ ಗೌಡ

ದಿನಗಳಷ್ಟೆ ಉರುಳುತಿವೆ
ಆಧುನಿಕತೆಯ ಭಾವದಂಬಾರಿ ಮಾತ್ರ
ಏರುತಲೆ ಇದೆ ಮುಗಿಲಷ್ಟು
ಅಭಿಪ್ಸೆ ಅಲವರಿಕೆಗಳು ಮತ್ತಷ್ಟು
ಮನದೊಳಗೆ ಪುಟಿದೇಳುತ…
ನಿರ್ಣಯಗಳಾದಿಯಾಗಿ
ನಿಲುವುಗಳೊಂದಿಗೆ
ನವ್ಯ ಭರವಸೆಯ ಕೊಂಡಿ ಬೆಸೆದು
ನಾಳೆಗಳ ಸುಸ್ಥಿರಕಾಗಿ
ಸುಹಾಸದಿಂದಲೆ ಆಹ್ವಾನಿಸೋಣ
ಹಳೆಯ ಕ್ಯಾಲೆಂಡಿರಿಗೆ
ವಿದಾಯಿಸುತ್ತ ಹೊಸ ಕ್ಯಾಲೆಂಡರಿನ
ಈ ದಿನಕೆ ಸುಹೃದ್ಯದಿ ಸ್ವಾಗತಿಸೋಣ…
ತೊಟ್ಟ ಪ್ರತಿಜ್ಞೆಗಳು
ಮಾಡಿದ ನಿರ್ಣಯಗಳು
ತೆಗೆದುಕೊಂಡ ನಿಲುವುಗಳು
ಕಾರ್ಯರೂಪದಲಿ ಚಿಮ್ಮಲಿ
ವರ್ಷದ್ಹನಿಗಳು ಧರೆಯೊಡಲ ಅಪ್ಪುವಂತೆ
ಮಾತಿಗಿಂತ ಕೃತಿ ಲೇಸು
ಮಾಡಿ ತೋರಿಸುವುದರಲ್ಲಿದೆ ತಾಕತ್ತು
ಸಾಧಿಸಿ ತೋರೋಣ
ನಮ್ಮೊಳಗಿನ ಗತ್ತು
ಅದುವೆ ಬಾಳಯಾನದ ಕರಾಮತ್ತು
ಅದ್ಭುತವಾಗಿ ಸಾಗಲಿ ಈ ಗಮ್ಮತ್ತು…
ಕಳೆದ ದಿನಮಾನಸಗಳಲ್ಲಿ
ಮಾಡಿರುವುದಾದರು ಏನು ವಿಶೇಷ
ಬರೀ ಸಶೇಷಗಳೆ ಹೆಚ್ಚಲ್ಲವೆ..?
ಹಳತುಗಳ ಮರೆಯದೆ
ಕೃತಜ್ಞತೆಯ ಸಾಲಿನಲಿ ನಡೆಯೋಣ
ಹೊಸತುಗಳ ರೂಪಿಸಿ
ಭರವಸೆಯ ಹಾದಿಯಲಿ ಸಾಗೋಣ…
ಅನುಭವಿಸಿದ ನೋವು ನಿರಾಸೆ
ಯಾತನೆ ದುಃಖ ದುಮ್ಮಾನ
ದುಗುಡಗಳ ಮರೆತು ನವಕನಸುಗಳೊಂದಿಗೆ
ನವ ಭಾಷ್ಯ ಬರೆಯೋಣ….
ಸೃಷ್ಟಿಯ ಹೊಸ ಸಂವತ್ಸರವೆ
ನಮ್ಮೆಲ್ಲರ ಯುಗಾದಿ
ಸಂಸ್ಕೃತಿ ಸಂಸ್ಕಾರ
ಬಿಂಬಿಸೊ ನಮ್ಮೀ ಹಬ್ಬ
ಹಸಿರೊಡಲ ನಲಿಸೊ ಮನದೊಡಲ
ನಗಿಸೊ ಅದ್ವಿತೀಯ ಹಬ್ಬ….
ಲೋಕದೆಲ್ಲೆಡೆ ಕ್ಯಾಲೆಂಡರ್ ಬದಲಾವಣೆಯ
ದಿನವನ್ನೆ ಹೊಸವರ್ಷವಾಗಿ
ಆಚರಿಸೊ ನಿಟ್ಟಿನಲಿ
ಪಾಶ್ಚಾತ್ಯ ಸೊಗಡು ಸಂಸ್ಕೃತಿಯುಳ್ಳ
ಈ ಕ್ಯಾಲೆಂಡರಿನ ದಿನವ ಸ್ವಾಗತಿಸುತ
ಹಳೆಯ ದಿನಗಳ ನೆನೆಯುತ
ಕೆಟ್ಟ ನೋವುಗಳ ಮರೆಯುತ
ಸ್ಪಷ್ಟ ನಿಲುವುಗಳೊಂದಿಗೆ
ಮುನ್ನಡೆಯೋಣ…





ಹೊಸ ಭರವಸೆಗಳೊಂದಿಗೆ ಸ್ವಾಗತಿಸುವ ಕ್ಯಾಲೆಂಡರ್ ಹೊಸವರುಷ… ನೀಡಲಿ ನಿಮಗೆ ಮತ್ತಷ್ಟು ಉತ್ಸಾಹ ಸಮೃದ್ಧಿ ಸಂತಸ….
Thank you sir