ಅಂಕಣ ಸಂಗಾತಿ
ಸಿನಿ ಸಂಗಾತಿ
ಕುಸುಮ ಮಂಜುನಾಥ್
ಯಶೋಧ -(ತೆಲುಗು ) ತಾಯ್ತನ ಕುರಿತಾದ ಸಿನಿಮಾ
ಕಾಣೆಯಾದ ತನ್ನ ತಂಗಿಯನ್ನು ಹುಡುಕಲು ಹೊರಡುವ ಯಶೋದ ಎಂಬ ಯುವತಿ ಅನಿವಾರ್ಯವಾಗಿ ಬಾಡಿಗೆ ತಾಯಿಯಾಗಬೇಕಾಗುತ್ತದೆ. ಕೃತಕ ಗರ್ಭಧಾರಣೆಯ ಮೂಲಕ ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಂಡ ಮರುಗಳಿಗೆಯೇ ಅವಳನ್ನು ಪ್ರತ್ಯೇಕ ವಾಸದ ಮನೆಗೆ ಕಳಿಸಲಾಗುತ್ತದೆ , ಆ ಮನೆ ಭವ್ಯ ವ್ಯವಸ್ಥೆಯ ತಾಣ.
ಆಧುನಿಕ ಜಗತ್ತಿನ ಎಲ್ಲ ಸೌಲಭ್ಯಗಳು ಅಲ್ಲಿ ಲಭ್ಯ, ಆದರೆ ಹೊರ ಜಗತ್ತಿನಿಂದ ಅದು ವಿಮುಖ ,ಸಿ ಸಿ ಟೀವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಅವರೆಲ್ಲರೂ ಬಂಧಿಗಳು.
ಅಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸುವ ವ್ಯಕ್ತಿ ಮಧು (ವರಲಕ್ಷ್ಮಿ ಶರತ್ ಕುಮಾರ್ ), ಅಲ್ಲಿ ಯಶೋದಾಳಂತೆ ಹಲವಾರು ಹೆಣ್ಣು ಮಕ್ಕಳು ಬಾಡಿಗೆ ತಾಯಿಯಾಗಲು ಒಪ್ಪಿ ಬಂದವರು , ಹೆಚ್ಚಿನವರು ಹಣದ ಅಗತ್ಯಕ್ಕಾಗಿ ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಂಡವರು. .ಹೊತ್ತು ಹೊತ್ತಿಗೆ ಮಾತ್ರೆ ಔಷಧಿ ನುಂಗುತ್ತಾ ಶುಶ್ರೂರಕರಿಂದ, ವೈದ್ಯರಿಂದ ಆರೈಕೆ ತಪಾಸನಣೆಗಳನ್ನು ನಡೆಸಿಕೊಂಡು ಅವರೆಲ್ಲ ದಿನ ಕಳೆಯುತ್ತಿದ್ದಾರೆ.
ಅಗತ್ಯ ವ್ಯವಸ್ಥೆಗಳೆಲ್ಲವಿದ್ದರೂ ಅಲ್ಲಿನ ಉಸಿರು ಕಟ್ಟುವ ವಾತಾವರಣ ಅವರಿಗೆ ಒಂದು ರೀತಿಯ ಇರಸು ಮುರುಸು ತಂದಿರುತ್ತದೆ .ಹೊರಗಿನ ಜಗತ್ತಿನ ಸಂಪರ್ಕವಿಲ್ಲದೆ ಆ ಹೆಣ್ಣು ಮಕ್ಕಳು ಒಂದು ರೀತಿಯ ಅಭದ್ರತೆಯಲ್ಲಿ ಅತಂತ್ರದಲ್ಲಿ ಕಾಲತಳ್ಳುತ್ತಿದ್ದಾರೆ.
ಹೀಗಿರುವಾಗ ಅವಳಲ್ಲೊಬ್ಬಳು ಹುಡುಗಿ ಹೆರಿಗೆ ನೋವಿಗೆ ಒಳಗಾಗುತ್ತಾಳೆ. ಹೆರಿಗೆಯ ಕೋಣೆಗೆ ತೆರಳುವ ಹುಡುಗಿ ಅಲ್ಲಿಂದಾಚೆಗೆ ಕಣ್ಮರೆಯಾಗುತ್ತಾಳೆ, ಅವಳ ಮಗುವನ್ನು ತೋರಿಸುವುದಿಲ್ಲ ಮಗು ಸತ್ತಿದೆ ಎಂದು ಇವರಿಗೆ ತಿಳಿಸುತ್ತಾರೆ . ಆ ಹುಡುಗಿಯ ವಿಷಯವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುತ್ತಾರೆ.
ಇದು ಯಶೋಧಾಳಲ್ಲೀ ಅನುಮಾನವನ್ನು ಹುಟ್ಟು ಹಾಕುತ್ತದೆ ,ಮತ್ತೆರಡು ದಿನಗಳಲ್ಲಿ ಮತ್ತೊಬ್ಬ ಹುಡುಗಿಯು ಲೇಬರ್ ವಾರ್ಡಿನಿಂದಲೇ ಕಣ್ಮರೆಯಾಗುತ್ತಾಳೆ. ಲೇಬರ್ ವಾರ್ಡಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ.
ಅವಳನ್ನು ಹುಡುಕಲು ಹೊರಡುವ ಯಶೋಧ ಹೊಸ ಸಾಹಸಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾಳೆ. ಇಲ್ಲಿಂದ ಆಚೆಗೆ ಕಥೆ ಬೇರೆ ತಿರುವು ಪಡೆಯುತ್ತದೆ.
ಇದಕ್ಕೆ ಪೂರಕವಾಗಿ ಮತ್ತೊಂದೆಡೆ ಹಾಲಿವುಡ್ ನ ನಾಯಕಿ ಒಬ್ಬಳು ಅಸಹಜವಾಗಿ ಸಾಯುತ್ತಾಳೆ. ಭಾರತಕ್ಕೆ ಬರುವ ವಿದೇಶಿ ಮಾಡೆಲ್ ಒಬ್ಬಳು ಹತ್ಯೆಗೀಡಾಗುತ್ತಾಳೆ. ಅವಳ ಸಾವಿನ ರಹಸ್ಯವನ್ನು ಭೇದಿಸ ಹೊರಡುವ ಪೊಲೀಸರಿಗೆ ಎದುರಾಗುವುದು ನೂರಾರು ಅಡ್ಡಿ ಆತಂಕಗಳು. ಅವೆಲ್ಲವನ್ನು ಭೇದಿಸುತ್ತಾ ಮುಂದೆ ಸಾಗಿದಾಗ ಅವರಿಗೆ ಅನುಮಾನ ಹುಟ್ಟುವುದು ಮಧು ನಡೆಸುವ ಸೌಂದರ್ಯವರ್ಧಕ ಕಂಪನಿಯ ಮೇಲೆ.
ಮುಂದೆ ಪೊಲೀಸರ ತನಿಖೆ ಹಾಗೂ ಯಶೋಧಾಳ ರಹಸ್ಯ ಬಯಲು ಮಾಡುವ ಕಾರ್ಯಾಚರಣೆ ಒಂದಕ್ಕೊಂದು ಸಮಾನಾಂತರವಾಗಿ ಚಿತ್ರದಲ್ಲಿ ಸಾಗುತ್ತದೆ.
ಈ ಎರಡು ಕಾರ್ಯಾಚರಣೆಗಳು ನಡೆಯುವುದು ಯಾವುದರ ಕುರಿತಂತೆ, ಕಾಣೆಯಾದ ಗರ್ಭಿಣಿ ಹುಡುಗಿಯರನ್ನು ಹುಡುಕುತ್ತಾ ಹೊರಡುವ ಯಶೋಧ ಹೊರಗೆಡವುವ ಸತ್ಯಾಂಶಗಳೇನು ?ಎಂಬುದು ಚಿತ್ರದ ತಿರುಳು.
ಹಿಂದುಳಿದ ಬಡದೇಶದಲ್ಲಿ ನಡೆದ ಸತ್ಯ ಘಟನೆಯನ್ನು ಆದರಿಸಿದ ಚಿತ್ರ ಇದು. ಬೆಚ್ಚಿ ಬೆಳಿಸುವ ಆ ಸತ್ಯ ಕಥೆ ಮನುಕುಲವನ್ನೇ ನಾಚಿಸುವಂಥದ್ದು ಮೆಡಿಕಲ್ ಮಾಫಿಯಾ ವನ್ನು ಕುರಿತಾದದ್ದು.
ತಾನು ತಯಾರಿಸುವ ಚಿರ ಯೌವ್ವನವನ್ನು ಹೊಂದುವ (ಎವರ್ ಯೂತ್ ಕ್ರೀಮ್) ಪ್ರಸಾದನ ತಯಾರಿಕೆಯಲ್ಲಿ ಅದು ಬಳಸಲು ಹೊರಡುವುದು ಹೆಣ್ಣಿನ ಭ್ರೂಣದಲ್ಲಿನ ಕಿಣ್ವಗಳನ್ನು ( ಎನ್ಸೈಮ್) ಗ ಳನ್ನು ಈ ಕೆಲಸಕ್ಕಾಗಿ ಅವರು ಬಳಸಿಕೊಳ್ಳುವುದು ಹಣದ ಅಗತ್ಯವಿರುವ ಬಡ ಹೆಣ್ಣು ಮಕ್ಕಳನ್ನು, ಹೆಣ್ಣು ಮಕ್ಕಳಿಗೆ ಕೃತಕ ಗರ್ಭಧಾರಣೆ ಮಾಡಿಸಿ 9ನೇ ತಿಂಗಳಲ್ಲಿ ಅವರ ಭ್ರೂಣವನ್ನು ಹೊರತೆಗೆದು ಸೌಂದರ್ಯವರ್ಧಕದ ತಯಾರಿಕೆಯಲ್ಲಿ ಬಳಸುತ್ತಾರೆ.
ಈ ಎಳೆಯನ್ನೇ ಯಶೋಧ ಸಿನಿಮಾದಲ್ಲಿ ಬಳಸಿದ್ದರೂ ಅದಕ್ಕೆ ಹೊಸದೊಂದು ರೂಪವನ್ನೇ ನೀಡಿದ್ದಾರೆ.
ಸತ್ಯ ಕತೆ ಯನ್ನಾಧರಿಸಿದ ಈ ಸಿನಿಮಾದಲ್ಲಿ ರಹಸ್ಯಗಳನ್ನು ಭೇದಿಸಲು ಹೊರಡತ್ತ ಸಾಗುವ ನಾಯಕಿಯಾಗಿ ಸಮಂತ ಋತ್ ಪ್ರಭು ಅಮೋಘ ಅಭಿನಯ ನೀಡಿದ್ದಾರೆ. ಸಾಹಸದ ದೃಶ್ಯಗಳಲ್ಲಿ ಒಡಲಲ್ಲಿ ಮಗುವನ್ನು ಇಟ್ಟುಕೊಂಡು ಅಸಹಾಯಕಳಾದರೂ ದಿಟ್ಟತನದಲ್ಲಿ ಹೋರಾಡುವ ದೃಶ್ಯಗಳಲ್ಲಿ ಅವರ ಅಭಿನಯ ಚಪ್ಪಾಳೆಗಿಟ್ಟಿಸುತ್ತದೆ, ಇಡೀ ಚಿತ್ರವನ್ನು ಅವರ ಲವಲವಿಕೆಯ ಅಭಿನಯ ಆವರಿಸಿಕೊಂಡಿದೆ.
ಸೌಂದರ್ಯೋಪಾಸಕಿಯಾಗಿ ಅಕ್ರಮವಾಗಿ ಹಣ ಸಂಪಾದಿಸ ಹೊರಟ ಸೌಂದರ್ಯವರ್ಧಕ ಕಂಪನಿಯ ನಿರ್ವಾಹಕಳಾಗಿ ಖಳನಾಯಕಿಯ (ಮಧು) ಕೆಟ್ಟ ಪಾತ್ರದ ಗತ್ತಿನಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಚೆನ್ನಾಗಿ ಅಭಿನಯಿಸಿದ್ದಾರೆ ಕಣ್ಣುಗಳಲ್ಲಿ ತಣ್ಣನೆ ಕ್ರೌರ್ಯವನ್ನು ತೋರಿಸುವ ಅವರ ನಟನಾಚತುರ್ಯ ಗಮನಾರ್ಹ.
ಮಧುವಿನ ಪಾಪ ಕೃತ್ಯಗಳಿಗೆ ತನ್ನ ಸಂಶೋಧನೆಗಳ ಮೂಲಕ ಸಹಾಯ ನೀಡುವ ವೈದ್ಯನ ಪಾತ್ರದಲ್ಲಿ (ಗೌತಮ್) ಉನ್ನಿ ಮುಕುಂದನ್ ಮನಸಳೆಯುತ್ತಾರೆ.
ರಹಸ್ಯ ಪೊಲೀಸ್ ಕಾರ್ಯಾಚರಣೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಗಳು ಕಥೆಯನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗಿದ್ದಾರೆ.
ಚಿತ್ರದ ತಾಂತ್ರಿಕ ಅಂಶಗಳಲ್ಲಿ ಎಂ .ಸುಕುಮಾರ್ರವರ ಛಾಯಾಗ್ರಹಣ ಮನಸೆಳೆಯುವಂತಿದೆ, ಆಸ್ಪತ್ರೆಯ ಕೃತಕ ಸೆಟ್ ಹಾಗೂ ಎಮ್ಮೆಗಳು ದಾಳಿ ಇಡುವ ಕಾಡಿನ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ .
ಮಣಿ ಶರ್ಮಾರ ಹಿನ್ನೆಲೆ ಸಂಗೀತ ಥ್ರಿಲ್ಲರ್ ಕಥೆಗೆ ಪೂರಕವಾಗಿದೆ.
ಸಿನಿಮಾದಲ್ಲಿ ಕಥೆಗೆ ಪೂರಕವಾಗಿ ಸೇರಿಸಿರುವ ಕೆಲವು ಅಂಶಗಳು ಬಾಲಿಶವಾಗಿವೆ. ಅನಗತ್ಯ ಅಂಶಗಳನ್ನು ಕೆಲವೆಡೆ ತುರುಕಲಾಗಿದೆ ಕೆಲವೊಂದು ಅಂಶಗಳು ತರ್ಕಕ್ಕೆ ಸಿಗುವುದಿಲ್ಲ ,ಈ ಎಲ್ಲ ಕೆಲವು ಮಿತಿಗಳ ನಡುವೆಯೂ ಇದೊಂದು ಹೊಸ ವಸ್ತುವನ್ನು ಒಳಗೊಂಡ ಚಿತ್ರವಾಗಿದ್ದು ಕುತೂಹಲ ಕೆರಳಿಸುತ್ತದೆ.
ಸಿನಿಮಾದಲ್ಲಿ ಯಶೋಧಗೆ ಅಡ್ಡಿಯಾಗಿ ಬರುವ ಕಠಿಣ ಸನ್ನಿವೇಶಗಳು ,ಅವುಗಳನ್ನು ಅವಳ ಬಿಡಿಸುವ ಪರಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ನೀಡುವಂತಿದೆ ಎಂತಹುದೇ ಸನ್ನಿವೇಶದಲ್ಲಿಯೂ ಎದೆಗುಂದದೆ ನಿಭಾಯಿಸಬಲ್ಲಅವಳ ಗಟ್ಟಿತನ ಮಾದರಿಯೆನಿಸುತ್ತದೆ.
ಹಾಗೆ ಬಂದು ಹಾಗೆ ಹೋಗುವ ರಂಜನೆಯ ಚಿತ್ರಗಳ ನಡುವೆ ವಿಭಿನ್ನಕಥಾವಸ್ತುವಿನಿಂದ ಯಶೋದ ಒಂದು ಕುತೂಹಲಕಾರಿ ಥ್ರಿಲ್ಲರ್ ಸಿನಿಮಾ ಎನಿಸಿಕೊಂಡಿದೆ.
ಚಿತ್ರವು ಹರಿ ಮತ್ತು ಹರೀಶ್ ಅವರಿಂದ ನಿರ್ದೇಶಿಸಲ್ಪಟ್ಟಿದೆ. ತೆಲುಗು ಮೂಲದ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ತಾರಾಗಣ- ಸಮಂತಾ ಋತು ಪ್ರಭು ,ವರಲಕ್ಷ್ಮಿ ಶರತ್ ಕುಮಾರ್ ,ಉನ್ನೀ ಮುಕುಂದನ್ ,ಮುರಳಿ ಶರ್ಮ ,ಸಂಪತ್ ರಾಜ್ ಇತರರು.
ನಿರ್ದೇಶನ -ಹರಿ ಮತ್ತು ಹರೀಶ್
ಸಂಗೀತ ನಿರ್ದೇಶನ- ಮಣಿ ಶರ್ಮ
ಛಾಯಾಗ್ರಹಣ- ಎಂ .ಸುಕುಮಾರ್
ಕುಸುಮ ಮಂಜುನಾಥ್
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.
ಸಾಹಸಿ ಯಶೋಧಳ ಶೋಧ ಕಾರ್ಯಾಚರಣೆ ಕುರಿತ ಚಲನ ಚಿತ್ರಕ್ಕೆ ಅರ್ಥ ಪೂರ್ಣ ವಿಮರ್ಶೆಯನ್ನ ಬರೆದಿದ್ದೀರಿ ಕುಸುಮಾ ಅವರೇ…ಚಿತ್ರವನ್ನು ನೋಡುವೆ ಖಂಡಿತವಾಗಿಯೂ..