ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂತುಷ್ಟನಿರುವೆ

ನರಸಿಂಗರಾವ ಹೇಮನೂರ

ಪ್ರಸಿದ್ಧನೆನಿಸಲು ನನಗಾವ ಆಸೆ ಇಲ್ಲ,
ನೀವು ಗುರುತಿಸಿರುವಿರಲ್ಲ
ಅಷ್ಟೇ ಸಾಕು ನನಗೆl

ಒಳ್ಳೆಯವರು ಒಳ್ಳೆಯದಾಗಿ
ಕೆಟ್ಟವರು ಕೆಟ್ಟದಾಗಿ ಅರಿತರು ನನ್ನ,
ಯಾರಿಗೆ ಎಷ್ಟು ಬೇಕಾಗಿತ್ತೊ
ಅಷ್ಟರ ಮಟ್ಟಿಗೆ ಅರಿತರು ನನ್ನ,

ಜೀವನಯಾತ್ರೆ ಎಷ್ಟೊಂದು ವಿಚಿತ್ರ! ಸಂಜೆ ಕಳೆಯುತ್ತಿಲ್ಲ,
ವರ್ಷಗಳು ಕಳೆಯುತ್ತಲೇ ಸಾಗಿವೆl

ಬದುಕಿನ ಓಟ ಎಷ್ಟು ವಿಚಿತ್ರವೆಂದರೆ,
ಗೆದ್ದರೆ ಹಲವರು ಬೆನ್ನು ಹತ್ತುವರು,
ಅದೇ ಸೋತರೆ ಬೆನ್ನ ಹಿಂದಿಡುವರು

ಈ ಮಣ್ಣ ಮೇಲೆ ಕುಳಿತಾಗಲೆಲ್ಲ
ನನ್ನ ಸ್ಥಾನಮಾನ ಸರಿ ಇರುವದೆಂದೇ ಅನಿಸಿದೆ.

ಬದುಕುವ ದಾರಿಯನ್ನು ಕಲಿತಿರುವೆನೀಗ
ಸಮುದ್ರದ ಪರಿಯಂತೆl
ಮೌನದಿಂದುಲಿದು ತನ್ನಷ್ಟಕ್ಕೆ
ತಾನೇ ಸುಖಿಸುವಂತೆl

ನನ್ನಲ್ಲಿ ಯಾವ ದೋಷಗಳಿಲ್ಲವೆಂತಲ್ಲ,
ಆದರೆ ಸತ್ಯವಾಗಿಯೂ ನನ್ನಲ್ಲಿ ಯಾವ ದ್ವೇಶಗಳಿಲ್ಲl

ನನ್ನ ವರ್ತನೆಯಿಂದ ವೈರಿಗಳು ಉರಿದು ಬೀಳುತ್ತಾರಾದರೂ
ನಾನು ಮಾತ್ರ ಕಾಲ ಕಾಲದಿಂದ
ಗೆಳೆಯರನ್ನಾಗಲಿ
ಪ್ರೀತಿಸುವವರನ್ನಾಗಲಿ
ಬದಲಿಸಿಯೇ ಇಲ್ಲl

ಒಂದು ಗಡಿಯಾರ ಪಡೆದು
ಕೈಗೆ ಕಟ್ಟಿಕೊಂಡೆ
ಆದರದು ತೋರುವ ಸಮಯವೀಗ
ನನ್ನನ್ನೇ ಬೆನ್ನು ಹತ್ತಿದೆl

ಮನೆಯೊಂದನ್ನು ಮಾಡಿ
ಸುಖದಿಂದಿರಬೇಕೆಂದಿದ್ದೆ
ಆದರೆ ಮನೆಯ ಜಂಜಾಟಗಳು ನನ್ನನ್ನು ಆಗಂತುಕನನ್ನಾಗಿ ಮಾಡಿಬಿಟ್ಟವು.

ಗಾಲಿಬ್, ಸುಖದ ಮಾತುಗಳನ್ನಾಡದಿರು ಈಗ
ಬಾಲ್ಯದ ರವಿವಾರ ಮತ್ತೆ ಮೂಡಿ ಬರವುದೇ ಈಗ.

ಬದುಕಿನ ಹೋರಾಟದಲ್ಲಿ
ಬಣ್ಣ ಮಾಸುವದೇಕೆ?
ಆಟಪಾಟಗಳಲ್ಲಿ ನಲಿವ
ಬದುಕೂ ಮಾವಿನ ತರಹ
ಮಾಗುವದೇಕೆ?

ನಗುನಗುತ್ತ ಎದ್ದೇಳುವ
ಬೆಳಗು ಇದ್ದಿತಾಗ
ನಗದೆ ಹಲವಾರು ಸಲ
ಸಂಜೆಯಾಗುತ್ತಿದೆ ಈಗ

ಸಂಬಂಧಗಳನ್ನು ಹಿಡಿದಿಡಲು
ಸಾಕಷ್ಟು ದೂರ ಬಂದಾಗಿದೆ
ನಮ್ಮವರೆನ್ನುವವರನ್ನು
ಹೊಂದಲು ನಮ್ಮ ಸ್ವಂತಿಕೆಯನ್ನೇ
ಕಳೆದು ಕೊಂಡಾಗಿದೆ.

ನಾನು ನಗುತ್ತಲೇ ಇರುವೆನೆಂದು
ಜನ ಹೇಳುತ್ತಾರೆ
ಆದರೆ ನಾನು ನೋವನ್ನು
ಮುಚ್ಚಿಡುತ್ತಲೇ ಸೋತು
ಹೋಗುತ್ತಿರುವೆ.

ಸಂತುಷ್ಟನಾಗಿರುವೆ,
ಎಲ್ಲರನ್ನು ಸಂತೋಷದಿಂದಿರಿಸುವೆ
ನನಗಾಗಿ ಕಾಳಜಿ ವಹಿಸದೆ
ಬೇರೆಯವರ ಒಳಿತನ್ನೆ
ಬಯಸುತ್ತಿರುವೆ.

ನನ್ನ ಅರ್ಹತೆ ಏನಿಲ್ಲವೆಂದು
ತಿಳಿದಿದೆ,
ಆದರೂ ಅರ್ಹ ವ್ಯಕ್ತಿಗಳ
ಒಡನಾಟ ಹೊಂದಿರುವೆ.


About The Author

1 thought on “ನರಸಿಂಗರಾವ ಹೇಮನೂರ-ಸಂತುಷ್ಟನಿರುವೆ”

  1. ಡಾ ಬಿ ಆರ್ ಅಣ್ಣಾಸಾಗರ

    ಬಹಳ ಚೆನ್ನಾಗಿದೆ. ಸಂಜೆ ಕಳೆಯುತ್ತಿಲ್ಲ ಆದರೆ ವರ್ಷಗಳೇ ಉರುಳುತ್ತಿವೆ. ಸಂತುಷ್ಟದಿಂದಿರುವೆ.

Leave a Reply

You cannot copy content of this page

Scroll to Top